ಎನ್.ಆರ್.ಪುರ: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಭೈರನಕಟ್ಟೆ ಸಮೀಪದ ಭದ್ರಾ ಹಿನ್ನೀರಿನಲ್ಲಿ ಈಜಲು ಇಳಿದ ಶಿವಮೊಗ್ಗದ 23 ವರ್ಷದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಮೃತರನ್ನು ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿ ನಿಖಿಲ್ ಆರ್. ಸಿಂಗ್ (23) ಎಂದು ಗುರುತಿಸಲಾಗಿದೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿಖಿಲ್ ತನ್ನ ಮೂವರು ಸ್ನೇಹಿತರೊಂದಿಗೆ ಭದ್ರಾ ಹಿನ್ನೀರಿನ ಪ್ರದೇಶಕ್ಕೆ ತೆರಳಿ ಪಾರ್ಟಿ ನಡೆಸಿದ್ದರು ಎನ್ನಲಾಗಿದೆ.
ಬಳಿಕ ನಿಖಿಲ್ ಈಜಲು ನೀರಿಗೆ ಇಳಿದಿದ್ದು, ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮತ್ತೆ ಮೇಲಕ್ಕೆ ಬರಲಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಶೋಧ ಕಾರ್ಯಾಚರಣೆ ನಡೆಸಿ ನಿಖಿಲ್ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
