ಬಾಗಲಕೋಟೆ : ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಕುಟುಂಬಸ್ಥರು ಮೃತ ವ್ಯಕ್ತಿಯ ಶವವನ್ನೇ ತಹಶೀಲ್ದಾರ್ ಕಚೇರಿ ಮುಂದೆ ಇರಿಸಿ ಪ್ರತಿಭಟನೆ ನಡೆಸಿದ ಘಟನೆ ಜಮಖಂಡಿಯಲ್ಲಿ ನಡೆದಿದೆ.
ಜಮಖಂಡಿ ನಗರದ ಅವಟಿ ಗಲ್ಲಿ ನಿವಾಸಿ ಯಲ್ಲಪ್ಪ ವಾಗೆಣ್ಣವರ (76) ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೃತರಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿಗೆ ಒಬ್ಬ ಮಗನಿದ್ದರೆ, ಎರಡನೇ ಪತ್ನಿಗೆ ಐವರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣುಮಗಳು ಇದ್ದಾರೆ ಎನ್ನಲಾಗಿದೆ.
ಮೃತರ ಎರಡನೇ ಪತ್ನಿಯ ಇಬ್ಬರು ಮಕ್ಕಳು 2 ಎಕರೆ 15 ಗುಂಟೆ ಜಮೀನನ್ನು ಕುಟುಂಬದ ಇತರ ಸದಸ್ಯರಿಗೆ ತಿಳಿಯದಂತೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಾರಾಟವಾಗಿರುವ ಜಮೀನಿನ ವ್ಯವಹಾರವನ್ನು ತಡೆಹಿಡಿದು, ತಮ್ಮ ಪಾಲಿಗೆ ಬರಬೇಕಾದ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಮೊದಲ ಪತ್ನಿ, ಆಕೆಯ ಮಗ ಹಾಗೂ ಎರಡನೇ ಪತ್ನಿಯ ಮೂವರು ಮಕ್ಕಳು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೃತದೇಹವನ್ನು ಜಮಖಂಡಿ ತಹಶೀಲ್ದಾರ್ ಕಚೇರಿ ಮುಂದೆ ಇರಿಸಿ ಧರಣಿ ನಡೆಸಿದರು. ಆಸ್ತಿ ವಿವಾದ ಬಗೆಹರಿಸಿ ನ್ಯಾಯ ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಘಟನೆಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಧಿಕಾರಿಗಳು ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು ಎನ್ನಲಾಗಿದೆ.
