ತಂದೆಯ ಹಳೆಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ರಾಕಿಂಗ್ ಸ್ಟಾರ್‌ನ ಬದುಕಿನ ಕಷ್ಟದ ದಿನಗಳ ನೆನಪು
ಬೆಂಗಳೂರು: ಇಂದು ಭಾರತೀಯ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್, ಸಿನಿಮಾ ರಂಗಕ್ಕೆ ಬರುವ ಮುನ್ನ ಸಾಮಾನ್ಯ ಜೀವನ ನಡೆಸುತ್ತಿದ್ದರು. ಕಾಲೇಜು ದಿನಗಳಲ್ಲಿ ಕುಟುಂಬಕ್ಕೆ ನೆರವಾಗಲು ಅವರು ಕಿರಾಣಿ ಅಂಗಡಿಯನ್ನೂ ನಡೆಸುತ್ತಿದ್ದರು ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.
ಇತ್ತೀಚೆಗೆ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡ ಯಶ್, ಕಾಲೇಜು ಪ್ರವೇಶಿಸಿದ ಬಳಿಕ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಹಾಗೂ ಸಹಪಾಠಿಗಳ ಜೀವನಶೈಲಿಯ ನಡುವಿನ ವ್ಯತ್ಯಾಸ ತಮ್ಮ ಗಮನಕ್ಕೆ ಬಂದಿತ್ತು ಎಂದು ಹೇಳಿದ್ದಾರೆ.
ಶಾಲಾ ದಿನಗಳಲ್ಲಿ ಹಣ ಅಥವಾ ಸಾಮಾಜಿಕ ಸ್ಥಾನಮಾನದಲ್ಲಿ ಯಾವುದೇ ವ್ಯತ್ಯಾಸ ತಮಗೆ ಅನ್ನಿಸಿರಲಿಲ್ಲ. ಆದರೆ ಕಾಲೇಜಿಗೆ ಹೋದಾಗ ಬಹುತೇಕ ವಿದ್ಯಾರ್ಥಿಗಳು ಬೈಕ್, ಕಾರುಗಳಲ್ಲಿ ಬರುತ್ತಿದ್ದರು. ಉತ್ತಮ ಬಟ್ಟೆಗಳನ್ನು ಧರಿಸುತ್ತಿದ್ದರು. ಆದರೆ ತಮ್ಮ ಬಳಿ ತಂದೆಯ ಹಳೆಯ ಸ್ಕೂಟರ್ ಮಾತ್ರ ಇತ್ತು ಎಂದು ಯಶ್ ಹೇಳಿದ್ದಾರೆ.
“ಕುಟುಂಬವನ್ನು ಬೆಂಬಲಿಸಲು ನಾನು ಆಗ ಕಿರಾಣಿ ಅಂಗಡಿಯೊಂದನ್ನು ಆರಂಭಿಸಿದ್ದೆ. ಅಂಗಡಿಗೆ ಸಾಮಾನು ತರಬೇಕಾದಾಗ ತಂದೆಯ ಹಳೆಯ ಸ್ಕೂಟರ್‌ನಲ್ಲೇ ಹೋಗುತ್ತಿದ್ದೆ. ಸ್ನೇಹಿತರು ನನ್ನನ್ನು ಹಾಗೆ ನೋಡಬಾರದು ಎಂಬ ಭಾವನೆ ಕೆಲವೊಮ್ಮೆ ಕಾಡುತ್ತಿತ್ತು. ಆ ದಿನಗಳಲ್ಲಿ ನನಗೆ ಕೀಳರಿಮೆ ಕೂಡ ಉಂಟಾಗುತ್ತಿತ್ತು” ಎಂದು ಯಶ್ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ.
ತಮ್ಮ ಪೋಷಕರ ಬಗ್ಗೆ ಮಾತನಾಡಿದ ಯಶ್, ಅವರು ಕುಟುಂಬಕ್ಕಾಗಿ ದೊಡ್ಡ ಆಸ್ತಿಪಾಸ್ತಿಗಳನ್ನು ನಿರ್ಮಿಸಲು ಸಾಧ್ಯವಾಗದಿದ್ದರೂ, ಜೀವನದ ಅಮೂಲ್ಯ ಮೌಲ್ಯಗಳನ್ನು ಕಲಿಸಿದರು ಮತ್ತು ತಮ್ಮ ಮೇಲೆ ಸದಾ ನಂಬಿಕೆ ಇಟ್ಟಿದ್ದರು ಎಂದು ಹೇಳಿದ್ದಾರೆ.
“ನಮ್ಮ ಪೋಷಕರು ನಮಗಾಗಿ ಆಸ್ತಿಪಾಸ್ತಿ ನಿರ್ಮಿಸಲು ಸಾಧ್ಯವಾಗಲಿಲ್ಲ. ಆದರೆ ಜೀವನದ ಮೌಲ್ಯಗಳನ್ನು ಕಲಿಸಲು ಅವರು ಮಾಡಿದ ತ್ಯಾಗಕ್ಕೆ ನಾನು ಸದಾ ಕೃತಜ್ಞ. ಅವರು ನನ್ನ ಮೇಲೆ ನಂಬಿಕೆ ಇಟ್ಟು, ನನಗೆ ಬೇಕಾದ ಎಲ್ಲವನ್ನೂ ನೀಡಿದರು” ಎಂದು ಯಶ್ ಹೇಳಿದ್ದಾರೆ.
ಸಾಮಾನ್ಯ ಕುಟುಂಬದಿಂದ ಬಂದ ಯಶ್, ಕಿರಾಣಿ ಅಂಗಡಿ ನಡೆಸುತ್ತಿದ್ದ ದಿನಗಳಿಂದ ಇಂದು ಭಾರತೀಯ ಚಿತ್ರರಂಗದ ಪ್ರಮುಖ ತಾರೆಯಾಗಿ ಬೆಳೆದಿರುವುದು ಅವರ ಯಶಸ್ಸಿನ ಪಯಣಕ್ಕೆ ಮತ್ತೊಂದು ಆಯಾಮ ನೀಡಿದೆ.
ಈ ನಡುವೆ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಆಗಸ್ಟ್ 26ರಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ ಒನ್’ ಚಿತ್ರವೂ ಯಶ್ ಅವರ ಮುಂದಿನ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ.
-ಮೂಲ ಇಂಡಿಯಾ ಟುಡೇ
next post
