ಗುವಾಹಟಿ : ಮದುವೆಯಾದ ಕೆಲವೇ ತಿಂಗಳಲ್ಲೇ 25 ವರ್ಷದ ಮಹಿಳೆಯೊಬ್ಬರು ಅಪಾರ್ಟ್‌ಮೆಂಟ್‌ನಲ್ಲಿ ಭೀಕರವಾಗಿ ಹತ್ಯೆಯಾಗಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪತಿಯನ್ನು ಪೊಲೀಸರು ಬಂಧಿಸಿದ್ದು, ಹತ್ಯೆಯ ಹಿಂದಿನ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.
ಮೃತಳನ್ನು ರಿಯಾ ತಾಲ್ಲೂಕುದಾರ್ (25) ಎಂದು ಗುರುತಿಸಲಾಗಿದೆ. ಆಕೆಯ ಪತಿ ರಾಮಾನುಜನ್ ಗೋಸ್ವಾಮಿ ಆರೋಪಿಯಾಗಿದ್ದು, ಭಾನುವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದಾನೆ.
ಸೆ.6ರಂದು ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದಂಪತಿ ಎರಡು ದಿನಗಳಿಂದ ಕಾಣಿಸದಿರುವುದು ಹಾಗೂ ಅವರ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿರುವುದರಿಂದ ಅನುಮಾನಗೊಂಡ ಪೊಲೀಸರು ಮನೆಗೆ ತೆರಳಿ ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ.
ಈ ವೇಳೆ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ದೇಹ ಕೊಳೆಯಲು ಆರಂಭವಾಗಿತ್ತು. ಆಕೆಯ ಬೆರಳುಗಳಿಗೆ ಗಂಭೀರ ಗಾಯಗಳಾಗಿದ್ದವು. ಆರಂಭದಲ್ಲಿ ತಲೆ ಕಾಣೆಯಾಗಿತ್ತು. ಬಳಿಕ ಮನೆ ಪರಿಶೀಲಿಸಿದಾಗ ರೆಫ್ರಿಜರೇಟರ್‌ನಲ್ಲಿದ್ದ ಪಾಲಿಥಿನ್ ಚೀಲದಲ್ಲಿ ಮಹಿಳೆಯ ತಲೆ ಪತ್ತೆಯಾಗಿದೆ.
ಪೊಲೀಸರು ಮೃತದೇಹ ಹಾಗೂ ತಲೆಯನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸೆ.4ರಂದು ಆರೋಪಿಯನ್ನು ಕೊನೆಯ ಬಾರಿ ನೋಡಿರುವುದಾಗಿ ನೆರೆಹೊರೆಯವರು ತಿಳಿಸಿದ್ದಾರೆ.
ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಅದನ್ನು ಇದುವರೆಗೆ ಸಂಗ್ರಹಿಸಿರುವ ಸಾಕ್ಷ್ಯಗಳೊಂದಿಗೆ ಪರಿಶೀಲಿಸುತ್ತಿದ್ದಾರೆ. ದಂಪತಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿತ್ತೇ, ಹತ್ಯೆಗೆ ನಿಖರ ಕಾರಣವೇನು ಹಾಗೂ ಆರೋಪಿ ಶರಣಾಗಲು ಕಾರಣವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
