ಜನ ನೋಟ
ಶಿವಮೊಗ್ಗ

ಬಿಜೆಪಿಗರು ನಮ್ಮೊಂದಿಗೆ ಬರುವುದು ಬೇಡ: ಕಿಮ್ಮನೆ ರತ್ನಾಕರ್

ಕಸ್ತೂರಿರಂಗನ್ ವರದಿ ವಿರುದ್ಧ ಸೆ.7ರಂದು ಕಾಂಗ್ರೆಸ್ ಪಾದಯಾತ್ರೆ

ಶಿವಮೊಗ್ಗ: ಕಸ್ತೂರಿರಂಗನ್ ವರದಿ ವಿರುದ್ಧ ತೀರ್ಥಹಳ್ಳಿ ತಾಲೂಕಿನಲ್ಲಿ ಸೆ.7ರಂದು ಕಾಂಗ್ರೆಸ್ ವತಿಯಿಂದ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಘೋಷಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿ ತಾಲೂಕಿನ ಬಿಂತ್ಲಾ ಗ್ರಾಮದಿಂದ ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆ ಆರಂಭವಾಗಲಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ರಮೇಶ್ ಹೆಗ್ಡೆ ಚಾಲನೆ ನೀಡಲಿದ್ದಾರೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಬಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪಾದಯಾತ್ರೆ ಸಮಾರೋಪಗೊಳ್ಳಲಿದ್ದು, ಬಳಿಕ ನಡೆಯುವ ಬೃಹತ್ ಸಭೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗವಹಿಸಿ ಬೆಂಬಲ ನೀಡಲಿದ್ದಾರೆ ಎಂದರು.

2013ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಕಸ್ತೂರಿರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ಕರಡು ಕರೆಯಲಾಗಿತ್ತು. ಈ ಸಂಬಂಧ ರಚಿಸಿದ್ದ ಸಂಪುಟ ಸಮಿತಿಯಲ್ಲಿ ತಾವು ಸದಸ್ಯರಾಗಿದ್ದೆ. ಜನರಿಗೆ ಯೋಜನೆಯ ಕುರಿತು ಮಾಹಿತಿ ನೀಡಿ ಒಕ್ಕೊರಲಿನಿಂದ ವಿರೋಧಿಸಿದ್ದೆವು. ಇದೀಗ 2026ರ ಜುಲೈನಲ್ಲಿ ಮತ್ತೊಮ್ಮೆ ಕರಡು ಹೊರಡಿಸಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಬಿಜೆಪಿ ರಾಜ್ಯ ನಾಯಕರು ಹಾಗೂ ಸಂಸದರು ರಾಜ್ಯದಲ್ಲಿ ಹೋರಾಟ ನಡೆಸುವುದಕ್ಕಿಂತ ದೆಹಲಿಗೆ ತೆರಳಿ ಕೇಂದ್ರ ಅರಣ್ಯ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಯೋಜನೆ ಜಾರಿಯಾಗದಂತೆ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ಮನುಷ್ಯನ ವಾಸಕ್ಕೆ ಭೂಮಿ ಅಗತ್ಯ. ಕಾಡುಪ್ರಾಣಿಗಳು ಬದುಕಬೇಕು, ಮನುಷ್ಯ ಸಾಯಬೇಕು ಎಂಬ ನಿಲುವು ಸಾಧ್ಯವಿಲ್ಲ. ಎಸಿ ಕೊಠಡಿಗಳಲ್ಲಿ ಕುಳಿತು ಕಾನೂನು ರೂಪಿಸುವ ಬದಲು ಮಲೆನಾಡಿನ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. ಹೆದ್ದಾರಿ ನಿರ್ಮಾಣದಂತಹ ಯೋಜನೆಗಳಿಗೆ ಮರಗಳನ್ನು ತೆರವುಗೊಳಿಸುವಾಗ ಇಲ್ಲದ ಅರಣ್ಯ ನಿಯಮಗಳು, ಜನರು ಹಕ್ಕುಪತ್ರ ಕೇಳಿದಾಗ ಮಾತ್ರ ಅನ್ವಯವಾಗುತ್ತವೆ ಎಂದು ಅವರು ಟೀಕಿಸಿದರು.

ಬಿಜೆಪಿಗರಿಗೆ ಆಹ್ವಾನವಿಲ್ಲ

ಮಲೆನಾಡಿನ ಹಲವು ಭಾಗಗಳಲ್ಲಿ ಪಕ್ಷಾತೀತವಾಗಿ ಕಸ್ತೂರಿರಂಗನ್ ವರದಿ ವಿರುದ್ಧ ಪಾದಯಾತ್ರೆಗಳು ನಡೆಯುತ್ತಿವೆ. ಆದರೆ ತೀರ್ಥಹಳ್ಳಿಯಲ್ಲಿ ಬಿಜೆಪಿಗರು ಕಾಂಗ್ರೆಸ್ ಪಾದಯಾತ್ರೆಗೆ ಬೆಂಬಲ ನೀಡುವುದು ಬೇಡ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.

ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತ್ಯೇಕವಾಗಿ ಪಾದಯಾತ್ರೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಪಾದಯಾತ್ರೆಯಲ್ಲಿ ಬಿಜೆಪಿಗರು ಭಾಗವಹಿಸಿದರೆ ಜನರಿಗೆ ಗೊಂದಲ ಉಂಟಾಗುತ್ತದೆ. ಹೀಗಾಗಿ ಬಿಜೆಪಿಗರು ನಮ್ಮೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಬಾರದು ಎಂದರು.

ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ

ಬಿಂತ್ಲಾದಿಂದಲೇ ಪಾದಯಾತ್ರೆ ಆರಂಭಿಸಲು ಪ್ರಮುಖ ಕಾರಣಗಳಿವೆ. ಈ ಗ್ರಾಮವೂ ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಒಳಪಡುತ್ತದೆ. ಅಲ್ಲದೆ, ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರ ಪುತ್ರ ಬಿಂತ್ಲಾದಲ್ಲಿ 10 ಎಕರೆ ಜಮೀನು ಹೊಂದಿದ್ದು, ತಮ್ಮ ಬೆಂಬಲಿಗರಿಗೆ ಹಾಗೂ ಬೇಕಾದವರಿಗೆ ರಸ್ತೆ ಮಾಡಿಸಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯವರನ್ನು ಹೊರತುಪಡಿಸಿ ದೇಶದಲ್ಲಿ ಯಾರೂ ದೊಡ್ಡವರಲ್ಲ ಎಂಬ ಮನಸ್ಥಿತಿ ಅವರಲ್ಲಿದೆ. ಅವರ ಗುತ್ತಿಗೆದಾರರು ಮಾತ್ರ ಒಳ್ಳೆಯವರು, ಉಳಿದವರು ಯಾರೂ ಅಲ್ಲ ಎಂಬ ಧೋರಣೆ ಇದೆ. ತೀರ್ಥಹಳ್ಳಿ ಹಿಂದುಳಿದಿರುವುದಕ್ಕೆ ಅವರ ಆಡಳಿತವೇ ಕಾರಣ ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದರು.

Related posts

2018ರ ಮತದಾರರ ಹೆಚ್ಚಳದ ಬಗ್ಗೆ ತನಿಖೆಯಾಗಲಿ : ಕೆ.ಬಿ. ಪ್ರಸನ್ನಕುಮಾರ್

JanaNota Editor

ಶಿವಮೊಗ್ಗದಲ್ಲಿ ರಂಗ ದಸರಾ ಸಂಭ್ರಮ: 39 ಕಾರ್ಯಕ್ರಮ, 25 ನಾಟಕಗಳ ಪ್ರದರ್ಶನ

JanaNota Editor

ಸಾಗರ : ಲಗೇಜ್ ಆಟೋ ಡಿಕ್ಕಿ: ಗಂಭೀರವಾಗಿ ಗಾಯಗೊಂಡಿದ್ದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಸಾವು

JanaNota Editor