ಶಿವಮೊಗ್ಗ, : ಜಿಲ್ಲೆಯಾದ್ಯಂತ ನಡೆಯಲಿರುವ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಏಕಗವಾಕ್ಷಿ ವ್ಯವಸ್ಥೆಯಡಿ ವಿಧಿಸುವ ವಿವಿಧ ಶುಲ್ಕಗಳಲ್ಲಿ ವಿನಾಯಿತಿ ನೀಡಬೇಕು. ಗಣೇಶೋತ್ಸವದ ಸಂದರ್ಭದಲ್ಲಿ ಫ್ಲೆಕ್ಸ್ ಅಳವಡಿಕೆಗೆ ವಿಧಿಸುವ ಶುಲ್ಕವನ್ನೂ ರದ್ದುಗೊಳಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಒತ್ತಾಯಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವವು ಸಮಾಜವನ್ನು ಒಗ್ಗೂಡಿಸುವ ಹಾಗೂ ಏಕತೆಯ ಸಂದೇಶ ಸಾರುವ ಹಬ್ಬವಾಗಿದೆ. ಹಬ್ಬದ ಸಂಭ್ರಮ ಮುಕ್ತಾಯವಾಗುವವರೆಗೆ ನಗರದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗದಂತೆ ಹಾಗೂ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿನ ಶುಲ್ಕ ವಿಧಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಗಣಪತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತ ವಿಧಿಸಿರುವ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸುವಂತೆಯೂ ಅವರು ಮನವಿ ಮಾಡಿದರು.
ಮೂರು ಕಡೆ ಏಕಗವಾಕ್ಷಿ ಕೇಂದ್ರ
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಗಣಪತಿ ಪ್ರತಿಷ್ಠಾಪಿಸುವ ಸಂಘಗಳಿಗೆ ಅನುಕೂಲವಾಗುವಂತೆ ನಗರದ ನ್ಯೂಮಂಡ್ಲಿ, ರೈಲ್ವೆ ನಿಲ್ದಾಣ ಹಾಗೂ ಗೋಪಾಳದ ಮೆಸ್ಕಾಂ ಕಚೇರಿಗಳಲ್ಲಿ ಮೂರು ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.
ನಗರದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಗಣೇಶೋತ್ಸವ ಸಂಘಟನೆಗಳಿಗೆ ಕೆಲವು ನಿಯಮಗಳನ್ನು ವಿಧಿಸಲಾಗಿದೆ. ಸಾರ್ವಜನಿಕರ ಮನವಿಯನ್ನು ಪರಿಗಣಿಸಿ ಅಗತ್ಯವಿರುವಲ್ಲಿ ನಿಯಮಗಳನ್ನು ಸಡಿಲಿಸುವ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸಂಘಟಕರು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
20 ಕಡೆ ವಿಸರ್ಜನೆಗೆ ವ್ಯವಸ್ಥೆ
ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮಾತನಾಡಿ, ನಗರದಲ್ಲಿ 20 ಸ್ಥಳಗಳಲ್ಲಿ ಗಣಪತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, 35 ವಾರ್ಡ್ಗಳಲ್ಲಿ ವಾಟರ್ಟ್ಯಾಂಕ್ಗಳನ್ನು ನಿಯೋಜಿಸಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದರು.
ವಿಸರ್ಜನಾ ಸ್ಥಳಗಳಲ್ಲಿ ಮುಳುಗು ತಜ್ಞರ ಸೇವೆ, ಬೋಟ್ ಹಾಗೂ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಮೂರು ಕಡೆ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಡಿಜೆ ಬದಲು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಮಾತನಾಡಿ, ಗಣೇಶೋತ್ಸವ ಸಂಘಟನೆಗಳು ಡಿಜೆ ಸೌಂಡ್ಗಳಿಗೆ ಬದಲಾಗಿ ಸ್ಥಳೀಯ ಕಲಾವಿದರು ಮತ್ತು ಕಲಾತಂಡಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದರಿಂದ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ದೊರೆಯುವುದರ ಜೊತೆಗೆ ಶಬ್ದ ಮಾಲಿನ್ಯವನ್ನೂ ನಿಯಂತ್ರಿಸಬಹುದು ಎಂದರು.
ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ, ಸಮಸ್ಯೆಗಳು ಎದುರಾದಾಗ ಅವುಗಳನ್ನು ಗಂಭೀರವಾಗಿ ಪರಿಗಣಿಸುವ ಮುನ್ನ ಪೊಲೀಸರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಸಂಘಟಕರಿಗೆ ಮನವಿ ಮಾಡಿದರು.
ಸೌಹಾರ್ದತೆಗೆ ಆದ್ಯತೆ ನೀಡಲು ಮುಖಂಡರ ಕರೆ
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಮುದಾಯಗಳ ಮುಖಂಡರು ಗಣೇಶೋತ್ಸವವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಕರೆ ನೀಡಿದರು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಪೊಲೀಸ್ ಗಸ್ತು ಹೆಚ್ಚಿಸುವಂತೆ ಸಲಹೆ ನೀಡಲಾಯಿತು.
ಗಣೇಶೋತ್ಸವ ಸೇರಿದಂತೆ ಎಲ್ಲ ಹಬ್ಬಗಳಲ್ಲೂ ಶಾಂತಿ, ಸೌಹಾರ್ದತೆ ಹಾಗೂ ಸ್ವಚ್ಛತೆ ಕಾಪಾಡುವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಮುಖಂಡರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್, ಕರ್ನಾಟಕ ರಾಜ್ಯ ಜವುಳಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ಗೌಡ, ಡಿವೈಎಸ್ಪಿ ಕಾರಿಯಪ್ಪ ಸೇರಿದಂತೆ ವಿವಿಧ ಧರ್ಮಗಳ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
