ಬೆಂಗಳೂರು: ರಾಜಧಾನಿಯಲ್ಲಿರುವ ಖಾಲಿ ನಿವೇಶನಗಳ ಸ್ವಚ್ಛತೆ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಖಾಲಿ ಸೈಟ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾಲೀಕರ ಮೊದಲ ಮತ್ತು ಪ್ರಮುಖ ಕರ್ತವ್ಯವಾಗಿದ್ದು, ನಿರ್ಲಕ್ಷ್ಯ ವಹಿಸಿದರೆ ಸರ್ಕಾರವೇ ಜೆಸಿಬಿ ಬಳಸಿ ಸ್ವಚ್ಛಗೊಳಿಸಿ ಅದರ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡಲಿದೆ.
ಗ್ರೇಟರ್ ಬೆಂಗಳೂರು ಅಥಾರಿಟಿ ಕಾಯ್ದೆಯ ಸೆಕ್ಷನ್ 290 ಹಾಗೂ 274(1)ರ ಅಡಿಯಲ್ಲಿ ಖಾಲಿ ನಿವೇಶನಗಳ ಸ್ವಚ್ಛತೆಯ ಹೊಣೆ ಸಂಪೂರ್ಣವಾಗಿ ಮಾಲೀಕರ ಮೇಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಕಾನೂನಿನ ಅರಿವಿಲ್ಲ ಎಂಬ ಕಾರಣ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದೂ ಅವರು ಎಚ್ಚರಿಸಿದ್ದಾರೆ.
ಜಿಬಿಎ ಮತ್ತು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಸಹಯೋಗದಲ್ಲಿ ದೊಮ್ಮಲೂರು ಲೇಔಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಖಾಲಿ ನಿವೇಶನಗಳ ಸ್ವಚ್ಛತಾ ಅಭಿಯಾನ ಆರಂಭಿಸಲಾಗಿದೆ. ಮಾಲೀಕರು ಸ್ವಚ್ಛತೆ ಕೈಗೊಳ್ಳದಿದ್ದರೆ ಸರ್ಕಾರವೇ ಸ್ಥಳವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಿದೆ.
ಸಣ್ಣ ಸೈಟ್‌ಗಳ ಸ್ವಚ್ಛತೆಗೆ ಸುಮಾರು ₹6,700 ಹಾಗೂ ಕಸ ವಿಲೇವಾರಿಗೆ ₹19,000 ವರೆಗೆ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಇದೇ ವೇಳೆ, ಸರ್ಕಾರಿ ಯೋಜನೆಗಳಡಿ ನಿವೇಶನ ಪಡೆದವರು ನಾಲ್ಕು ವರ್ಷಗಳೊಳಗೆ ಮನೆ ನಿರ್ಮಿಸದಿದ್ದರೆ, ಅಂತಹ ಸೈಟ್‌ಗಳನ್ನು ಸರ್ಕಾರ ವಾಪಸ್ ಪಡೆಯುವ ಕುರಿತು ಸಹ ಚಿಂತನೆ ನಡೆದಿದೆ. ಸಾರ್ವಜನಿಕರಿಗೆ ಮನೆ ನಿರ್ಮಾಣಕ್ಕಾಗಿ ನೀಡಿರುವ ನಿವೇಶನಗಳನ್ನು ವರ್ಷಗಳ ಕಾಲ ಖಾಲಿ ಬಿಡುವುದು ಸರಿಯಲ್ಲ ಎಂದು ಸಚಿವರು ತಿಳಿಸಿದ್ದಾರೆ.
ನಗರದ ಸ್ವಚ್ಛತೆ, ಅಭಿವೃದ್ಧಿ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಖಾಲಿ ನಿವೇಶನಗಳ ಮಾಲೀಕರು ಸರ್ಕಾರದ ಕ್ರಮಕ್ಕೆ ಸಹಕರಿಸಬೇಕು ಎಂದು ಕೃಷ್ಣಬೈರೇಗೌಡ ಮನವಿ ಮಾಡಿದ್ದಾರೆ.
