ಜನ ನೋಟ
ರಾಜ್ಯ

ಕರ್ನಾಟಕ ಬಂದ್‌ಗೆ ಸಿಗದ ಪೂರ್ಣ ಬೆಂಬಲ: ಕೆಎಸ್‌ಆರ್‌ಟಿಸಿ, ಮೆಟ್ರೋ, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಣೆ

ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಆದೇಶಿಸಿರುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಾಳೆ (ಆಗಸ್ಟ್ 13) ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್‌ಗೆ ಮಿಶ್ರ ಬೆಂಬಲ ವ್ಯಕ್ತವಾಗಿದೆ. ಕೆಲವು ಪ್ರಮುಖ ಸಂಘಟನೆಗಳು ಈ ಬಂದ್‌ಗೆ ನೇರ ಬೆಂಬಲ ಸೂಚಿಸಿದರೆ, ಇನ್ನೂ ಕೆಲ ಸಂಘಟನೆಗಳು ಕೇವಲ ನೈತಿಕ ಬೆಂಬಲ ಸೂಚಿಸಿವೆ.

ವಾಟಾಳ್ ನಾಗರಾಜ್ ನೇತೃತ್ವದ ಒಕ್ಕೂಟದ ಜೊತೆಗೆ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘ, ಕನ್ನಡ ಸೇನೆ ಹಾಗೂ ಕನ್ನಡ ಜಾಗೃತಿ ವೇದಿಕೆಗಳು ಹೋರಾಟಕ್ಕೆ ಸಾಥ್ ನೀಡಲು ಮುಂದಾಗಿವೆ.

ಮತ್ತೊಂದೆಡೆ, ಹಲವು ಪ್ರಮುಖ ಸಂಘಟನೆಗಳು ಬಂದ್‌ನಿಂದ ದೂರ ಉಳಿಯಲು ನಿರ್ಧರಿಸಿವೆ. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಹಾಗೂ ಶಿವರಾಮೇಗೌಡ ಬಣಗಳೆರಡೂ ಬಂದ್‌ಗೆ ಬೆಂಬಲ ನೀಡುತ್ತಿಲ್ಲವೆಂದು ಸ್ಪಷ್ಟಪಡಿಸಿವೆ. ಇದರೊಂದಿಗೆ ಖಾಸಗಿ ಸಾರಿಗೆ ಒಕ್ಕೂಟ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ ಸಿಬ್ಬಂದಿ ಒಕ್ಕೂಟಗಳು, ಬಹುತೇಕ ಆಟೋ ಚಾಲಕರ ಒಕ್ಕೂಟಗಳು ಬಂದ್‌ಗೆ ಬೆಂಬಲ ನೀಡದಿರಲು ನಿರ್ಧರಿಸಿವೆ.

ಖಾಸಗಿ ಶಾಲೆಗಳ ಒಕ್ಕೂಟಗಳಾದ ರುಪ್ಸಾ ಮತ್ತು ಕ್ಯಾಮ್ಸ್ ಸಂಸ್ಥೆಗಳು, ಹೋಟೆಲ್ ಮಾಲೀಕರ ಸಂಘಗಳು ಕೇವಲ ನೈತಿಕ ಬೆಂಬಲ ಸೂಚಿಸಿವೆ. ಮತ್ತೊಂದೆಡೆ ಆರಂಭದಲ್ಲಿ ಬೆಂಬಲ ಸೂಚಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಬಂದ್‌ಗೆ ಬೆಂಬಲ ನೀಡದಿರಲು ನಿರ್ಧರಿಸಿದೆ.

“ಕಾವೇರಿ ವಿವಾದ ವಿಚಾರದಲ್ಲಿ ವಾಟಾಳ್ ಅವರ ಹೋರಾಟಕ್ಕೆ ನಮ್ಮ ಬೆಂಬಲ ಮೊದಲಿನಿಂದಲೂ ಇದೆ, ಇರಲಿದೆ. ಆದರೆ ಈ ಸಂದರ್ಭದಲ್ಲಿ ಅವರು ಕರೆ ನೀಡಿರುವ ಬಂದ್‌ಗೆ ನಮ್ಮ ಬೆಂಬಲವಿಲ್ಲ. ಅಗತ್ಯವಿದ್ದರೆ ಎಲ್ಲ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಮುಂದಿನ ದಿನಗಳಲ್ಲಿ ಬಂದ್ ಮಾಡೋಣವೆಂದು ವಾಟಾಳ್ ನಾಗರಾಜ್ ಅವರಿಗೆ ನಾವು ಮನವಿ ಮಾಡುತ್ತೇವೆ” ಎಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.

ಏನಿರಲಿದೆ? ಆಸ್ಪತ್ರೆ ಮತ್ತು ಮೆಡಿಕಲ್‌ಗಳು, ಶಾಲೆ – ಕಾಲೇಜು, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್, ಮೆಟ್ರೋ ರೈಲು ಸೇವೆಗಳು, ಖಾಸಗಿ ಬಸ್, ಆಟೋ, ಅಂಗಡಿಗಳು, ಹೋಟೆಲ್‌ಗಳು, ಬಟ್ಟೆ ಅಂಗಡಿ, ಸರ್ಕಾರಿ ಕಚೇರಿಗಳು, ಸ್ಥಳೀಯ ಆಡಳಿತ ಕಚೇರಿಗಳು, ಕೈಗಾರಿಕೆ, ಬೀದಿ ಬದಿ ಅಂಗಡಿಗಳು ಹಾಗೂ ಆಟೋ ಸೇವೆ ಎಂದಿನಂತೆ ಇರಲಿದೆ.

Related posts

ಬಿಜೆಪಿ ಪ್ರತಿಭಟನೆ ವೇಳೆ ಅವಘಡ : ಕಾರ್ಯಕರ್ತನ ಪ್ಯಾಂಟ್‌ಗೆ ಬೆಂಕಿ

JanaNota Editor

ವಿಧಾನ ಪರಿಷತ್ ಅರ್ಜಿಗಳ ಸಮಿತಿಗೆ ಬಲ್ಕೀಶ್ ಬಾನು ನೇಮಕ

JanaNota Editor

ಪ್ರಜ್ವಲ್ ರೇವಣ್ಣಗೆ ಅಕ್ರಮವಾಗಿ ಮೊಬೈಲ್ ಕೊಟ್ಟಿದ್ದ ವ್ಯಕ್ತಿಯ ಬಂಧನ

JanaNota Editor