ಶಿವಮೊಗ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನನ್ನ ಅಣ್ಣನ ಸಮಾನ. ನಮ್ಮ ತಂದೆಯ ಮೇಲಿನ ಗೌರವದಿಂದ ಸಂಪುಟದಲ್ಲಿ ನನಗೆ ಸ್ಥಾನ ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದೆ. ಮುಖ್ಯಮಂತ್ರಿ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿರ್ವಹಿಸುತ್ತೇನೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನೀಡಿರುವ ಸಹಕಾರವನ್ನು ಮುಂದೆಯೂ ಬಯಸುತ್ತೇನೆ ಎಂದರು.
ಸಂಪುಟ ಪುನರ್ರಚನೆ ಹಾಗೂ ಖಾತೆ ಹಂಚಿಕೆ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಸಚಿವ ಸ್ಥಾನ ಸಿಗದಿರುವುದರಿಂದ ಬೇಳೂರು ಗೋಪಾಲಕೃಷ್ಣ ಹಾಗೂ ಬಿ.ಕೆ. ಸಂಗಮೇಶ್ ಅಸಮಾಧಾನಗೊಂಡಿರುವುದು ತಿಳಿದಿದೆ. ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದು ಹೇಳಿದರು.
ಕಾಗೋಡು ತಿಮ್ಮಪ್ಪ ಅವರು ನನಗೆ ತಂದೆ ಸಮಾನರಾಗಿದ್ದು, ಸಚಿವ ಸ್ಥಾನ ದೊರೆತ ಬಳಿಕ ಅವರ ಆಶೀರ್ವಾದ ಪಡೆದಿದ್ದೇನೆ. ಕುಮಾರ್ ಬಂಗಾರಪ್ಪ ಅವರು ಸಂತಸ ವ್ಯಕ್ತಪಡಿಸಿರುವುದಕ್ಕೆ ಅವರಿಗೆ ಒಳ್ಳೆಯದಾಗಲಿ ಎಂದರು.
ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಗೌರವ ನೀಡಬೇಕು. ಅಸಮಾಧಾನಗಳಿದ್ದರೂ ಪಕ್ಷದ ಹಿತದೃಷ್ಟಿಯಿಂದ ಹಿರಿಯರು, ಕಿರಿಯರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಜಿಲ್ಲೆಯ ಜನರು ನೆನಪಿನಲ್ಲಿಟ್ಟುಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಗುರಿ ಹೊಂದಿದ್ದೇನೆ. ಕುಡಿಯುವ ನೀರು, ಹಕ್ಕುಪತ್ರ, ಅರಣ್ಯ ಭೂಮಿ ಸೇರಿದಂತೆ ಜಿಲ್ಲೆಯ ಹಲವು ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುತ್ತೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ, ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಕೇವಲ 35 ಸಚಿವ ಸ್ಥಾನಗಳಿದ್ದು, ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು. ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ಇತ್ತೀಚೆಗೆ ಉಂಟಾದ ಸಣ್ಣಪುಟ್ಟ ಗೊಂದಲಗಳನ್ನು ಮಾತುಕತೆ ಮೂಲಕ ಬಗೆಹರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾಕರ್, ಎಸ್. ರವಿಕುಮಾರ್, ಎನ್. ರಮೇಶ್, ಸಯ್ಯದ್ ವಾಹೀದ್ ಅಡ್ಡು, ಜಿ.ಡಿ. ಮಂಜುನಾಥ್, ಚಂದ್ರಭೂಪಾಲ್, ಶಿವಕುಮಾರ್, ರಂಗನಾಥ್, ಚೇತನ್ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
