ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಗಂಗಾ ನದಿ ದಂಡೆಯ ಸಮೀಪ ತರಬೇತಿ ವಿಮಾನ ಪತನಗೊಂಡು ಕರ್ನಾಟಕ ಮೂಲದ ತರಬೇತಿ ಪೈಲಟ್ ಸೇರಿದಂತೆ ಇಬ್ಬರು ಮೃತಪಟ್ಟಿರುವ ದುರಂತ ಘಟನೆ ನಡೆದಿದೆ.
ಗಾರ್ಗ್ ಏವಿಯೇಷನ್ ತರಬೇತಿ ಕೇಂದ್ರದ ಟೆಕ್ನಾಮ್ ವಿಮಾನವು ಗುರುವಾರ ಬೆಳಿಗ್ಗೆ ಸುಮಾರು 11.30ಕ್ಕೆ ಹಾರಾಟ ಆರಂಭಿಸಿತ್ತು. ಸುಮಾರು 20 ನಿಮಿಷಗಳ ಬಳಿಕ ನಾಥಪುರವಾ ಗ್ರಾಮದ ಸಮೀಪದ ಜಮೀನಿನಲ್ಲಿ ವಿಮಾನ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಗುಜರಾತ್ ಮೂಲದ ತರಬೇತುದಾರ ಸಚಿನ್ ಭಾಟಿಯಾ ಹಾಗೂ ಕರ್ನಾಟಕ ಮೂಲದ ತರಬೇತಿ ಪೈಲಟ್ ಅಭಿಷೇಕ್ ಪೂಜಾರಿ ಮೃತಪಟ್ಟಿದ್ದಾರೆ. ಸಚಿನ್ ಭಾಟಿಯಾ ಅವರಿಗೆ ಸುಮಾರು 3,000 ಗಂಟೆಗಳ ಹಾರಾಟದ ಅನುಭವವಿತ್ತು ಎಂದು ಕಾನ್ಪುರ ಪೊಲೀಸ್ ಕಮಿಷನರ್ ರಘುವೀರ್ ಲಾಲ್ ತಿಳಿಸಿದ್ದಾರೆ.
ಪತನಗೊಂಡ ವಿಮಾನವು ನಾಲ್ಕು ಆಸನಗಳ, ಅವಳಿ ಎಂಜಿನ್ ಹೊಂದಿದ ಇಟಲಿ ನಿರ್ಮಿತ ಟೆಕ್ನಾಮ್ ತರಬೇತಿ ವಿಮಾನವಾಗಿದ್ದು, ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳವನ್ನು ಪೊಲೀಸರು ಭದ್ರಪಡಿಸಿದ್ದು, ಅಪಘಾತದ ಕುರಿತು ಡಿಜಿಸಿಎ ತನಿಖೆ ನಡೆಸಲಿದೆ.
