ಶಿವಮೊಗ್ಗ, ಆ.21: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಗಜಲ್ ವಾತಾವರಣವನ್ನು ಬೆಳೆಸುವ ಉದ್ದೇಶದಿಂದ ಅಖಿಲ ಕರ್ನಾಟಕ ಮೂರನೇ ಗಜಲ್ ಸಮ್ಮೇಳನವನ್ನು ಆ.23ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ನಗರದ ಸಹ್ಯಾದ್ರಿ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಂಬಣ್ಣ ಅಮರಚಿಂತ ವೇದಿಕೆಯಲ್ಲಿ ಸಿದ್ಧರಾಮ ಹಿರೇಮಠ ಕೂಡಿಗಿ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಗಜಲ್ ಸಮ್ಮೇಳನದ ಸಂಚಾಲಕಿ ಡಾ. ಹಸೀನಾ ಎಚ್. ಖಾದ್ರಿ ಅವರು ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ರಾಜ್ಯಾಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ ಹಾಗೂ ಗಜಲ್ ಅಕಾಡೆಮಿಯ ಸರ್ವ ಸದಸ್ಯರ ಅಭಿಲಾಷೆಯಂತೆ ಶಿವಮೊಗ್ಗದಲ್ಲಿ ಗಜಲ್ ಸಾಹಿತ್ಯದ ವಾತಾವರಣವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಸವಿತಾ ನಾಗಭೂಷಣ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮಿರ್ಜಾ ಗಾಲಿಬ್ ಗಜಲ್ ಪ್ರಶಸ್ತಿ
ಈ ಬಾರಿ ಪ್ರಪ್ರಥಮವಾಗಿ ರಾಜ್ಯಮಟ್ಟದ ಮಿರ್ಜಾ ಗಾಲಿಬ್ ಗಜಲ್ ಪ್ರಶಸ್ತಿಯನ್ನು ಅಕಾಡೆಮಿ ವತಿಯಿಂದ ನೀಡಲಾಗುತ್ತಿದ್ದು, ರತ್ನ ಕೆ. ಭಟ್ ತಲಂಜೇರಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೊಹಮ್ಮದ್ ಅನ್ವರ್ ಸಾಬ್ ಖಾದ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಿದ್ಧರಾಮ ಹೊನ್ಮಲ್ ಅವರ ‘ಗಜಲ್ ಯಾನ’ ಅಕಾಡೆಮಿಯ ಗ್ರಂಥ ಲೋಕಾರ್ಪಣೆ ನಡೆಯಲಿದೆ. ನಿಕಟಪೂರ್ವ ಅಧ್ಯಕ್ಷ ಕಾಶೀನಾಥ ಅಂಬಲಗೆ, ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರು, ಸೇಡಂ ಹಾಗೂ ಹಿರಿಯ ಗಜಲ್‌ಕಾರರಾದ ಅಬ್ದುಲ್ ಹೈ ತೋರಣಗಲ್ಲು, ಸಿಕಂದರ್ ಅಲಿ ತೋರಣಗಲ್ಲು ಮತ್ತು ನೀಲಮ್ಮ ಬಿ. ಮಲೆ ಅವರು 2025-26ನೇ ಸಾಲಿನಲ್ಲಿ ಪ್ರಕಟಗೊಂಡ ಗಜಲ್ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ.
ಗಜಲ್ ಗಾಯನ, ಗೋಷ್ಠಿ
ಮಲೆನಾಡಿನ ಗಜಲ್ ಗಾಯಕ ಇಮ್ತಿಯಾಜ್ ಸುಲ್ತಾನ್ ಕೋಣಂದೂರು ಅವರಿಂದ ಗಜಲ್ ಗಾಯನ ನಡೆಯಲಿದೆ. ಎರಡು ಗಜಲ್ ಗೋಷ್ಠಿಗಳು, ಗಾಯನ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ಸೇರಿದಂತೆ ದಿನಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರೊ. ಮಂಜುನಾಥ್ ಕೆ.ಎನ್., ಚೆನ್ನಬಸಪ್ಪ ನ್ಯಾಮತಿ, ಹಸನ್ ಬೆಳ್ಳಿಗನೂಡು, ಪ್ರವೀಣ್ ಜವಳಿ, ವಾಗೀಶ್ ಆರಾಧ್ಯಮಠ ಹಾಗೂ ಇಸ್ಮಾಯಿಲ್ ಅವರು ಸ್ಥಳೀಯ ಸಂಚಾಲಕರಾಗಿ ಕಾರ್ಯಕ್ರಮದ ನಿರ್ವಹಣೆ ಮಾಡಲಿದ್ದಾರೆ.
ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಗಜಲ್‌ಕಾರರು, ಸ್ಥಳೀಯ ಗಜಲ್ ಆಸಕ್ತರು ಹಾಗೂ ಸಾಹಿತಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ. ಹಸೀನಾ ಎಚ್. ಖಾದ್ರಿ ತಿಳಿಸಿದರು.
