ಸಾಗರ: ಸಾಗರ ತಾಲ್ಲೂಕಿನ ಬಳಸಗೋಡು ಸಮೀಪ ಬುಧವಾರ ರಾತ್ರಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತರನ್ನು ಸಾಗರ ತಾಲ್ಲೂಕಿನ ಚಿಪ್ಳಿ ಗ್ರಾಮದ ನಿವಾಸಿ ವೆಂಕಟೇಶ್ ಎಂಬುವವರ ಪುತ್ರ ಅರ್ಜುನ್ (19) ಎಂದು ಗುರುತಿಸಲಾಗಿದೆ.
ಅರ್ಜುನ್ ಅವರು ಸಾಗರದಿಂದ ಆನಂದಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಶಿವಮೊಗ್ಗ ಮಾರ್ಗದಿಂದ ಸಾಗರದತ್ತ ಸಂಚರಿಸುತ್ತಿದ್ದ ಎಸ್.ಎನ್.ನಗರ ಮೂಲದ ಕಾರು ಚಾಲಕನ ನಿಯಂತ್ರಣ ತಪ್ಪಿ ಬಳಸಗೋಡು ಬಳಿ ಎದುರಿನಿಂದ ಬಂದ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ತೀವ್ರತೆಗೆ ಬೈಕ್ ಸವಾರ ಅರ್ಜುನ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
