ಶಿವಮೊಗ್ಗ, ಆ.20: ‘ಉಳುವವನೇ ಭೂಮಿಯ ಒಡೆಯ’ ಎಂಬ ಕಲ್ಪನೆಯ ಮೂಲಕ ಲಕ್ಷಾಂತರ ಶೋಷಿತರ ಬದುಕಿಗೆ ಬೆಳಕಾದ ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ ಕೊಡುಗೆಗಳು ಚಿರಸ್ಥಾಯಿಯಾಗಿವೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅರಸು ಅವರು ಕೇವಲ ಆಡಳಿತಗಾರರಾಗಿ ಉಳಿಯದೆ, ಶೋಷಿತ ಸಮುದಾಯಗಳಿಗೆ ರಾಜಕೀಯ ಹಾಗೂ ಸಾಮಾಜಿಕ ಧ್ವನಿ ನೀಡಿದ ಅಪರೂಪದ ಜನನಾಯಕರಾಗಿದ್ದರು. ಭೂಸುಧಾರಣೆ, ಮೀಸಲಾತಿ ಹಾಗೂ ಜೀತಪದ್ಧತಿ ನಿರ್ಮೂಲನೆಯಂತಹ ಕ್ರಾಂತಿಕಾರಿ ಕ್ರಮಗಳ ಮೂಲಕ ಸಾಮಾಜಿಕ ನ್ಯಾಯದ ಇತಿಹಾಸದಲ್ಲಿ ಮಹತ್ವದ ಬದಲಾವಣೆ ತಂದರು ಎಂದರು.
ಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಉದ್ಯೋಗ ಪ್ರಗತಿಗಾಗಿ ಎಲ್.ಜಿ. ಹಾವನೂರು ಆಯೋಗ ರಚಿಸಿ ಅದರ ವರದಿ ಅನುಷ್ಠಾನಗೊಳಿಸಿದರು. ಮಲ ಹೊರುವ ಪದ್ಧತಿ ಹಾಗೂ ಜೀತಪದ್ಧತಿ ನಿರ್ಮೂಲನೆ ಸೇರಿದಂತೆ ಕಾರ್ಮಿಕರು ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ ಹಲವು ಕಾಯ್ದೆಗಳನ್ನು ಜಾರಿಗೆ ತಂದರು. ಅವರ ಸಮಾಜವಾದ ಹಾಗೂ ಸಮತಾವಾದದ ತತ್ವಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನಗರದಲ್ಲಿ ನಿರ್ಮಾಣವಾಗುತ್ತಿರುವ ಡಿ. ದೇವರಾಜ ಅರಸು ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರದ ಗಮನ ಸೆಳೆಯುವುದಾಗಿ ಚಂದ್ರಭೂಪಾಲ್ ತಿಳಿಸಿದರು.
ಅರಸು ಅವರ ಜೀವನವೇ ಜೀವಂತ ಚರಿತ್ರೆ
ಕುವೆಂಪು ವಿಶ್ವವಿದ್ಯಾಲಯದ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಉಪನ್ಯಾಸ ನೀಡಿ, ಮುಂದಿನ ಅಭಿವೃದ್ಧಿಗೆ ಹಿಂದಿನ ಇತಿಹಾಸದ ಅವಲೋಕನ ಅಗತ್ಯ. ರೈತರು, ಕಾರ್ಮಿಕರು, ಜಲಗಾರರು ಹಾಗೂ ಕುಶಲಕರ್ಮಿಗಳು ಸೇರಿದಂತೆ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅರಸು ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದರು.
1972ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು ರಾಜ್ಯದ ಶೋಷಿತ ವರ್ಗಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದರು. 1973ರ ನವೆಂಬರ್ 1ರಂದು ‘ಮೈಸೂರು ರಾಜ್ಯ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದ ಹೆಗ್ಗಳಿಕೆ ಅವರದ್ದಾಗಿದೆ. ಭೂಸುಧಾರಣೆ, ಕನಿಷ್ಠ ಕೂಲಿ, ಋಣ ಪರಿಹಾರ, ಶಿಕ್ಷಣ, ನೀರಾವರಿ, ಮಲ ಹೊರುವ ಪದ್ಧತಿ ನಿಷೇಧ ಹಾಗೂ ವೃದ್ಧಾಪ್ಯ ವೇತನ ಸೇರಿದಂತೆ ಹಲವು ಜನಪರ ಕ್ರಮಗಳನ್ನು ಜಾರಿಗೆ ತಂದಿದ್ದರು ಎಂದು ವಿವರಿಸಿದರು.
ಅರಸು ತತ್ವಗಳನ್ನು ಅಳವಡಿಸಿಕೊಳ್ಳಿ

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಕರ್ನಾಟಕದ ಸಾಮಾಜಿಕ ಹಾಗೂ ರಾಜಕೀಯ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಅರಸು ಅವರು ಹಿಂದುಳಿದ ವರ್ಗಗಳ ಆಶಾದೀಪವಾಗಿದ್ದರು. ಭೂಸುಧಾರಣೆ ಸೇರಿದಂತೆ ಅವರು ಜಾರಿಗೆ ತಂದ ಕಾಯ್ದೆಗಳು ಹಾಗೂ ಸೌಲಭ್ಯಗಳ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕು. ಶಾಂತಿ, ಪ್ರಗತಿ ಮತ್ತು ಸಾಮರಸ್ಯಕ್ಕಾಗಿ ಅವರ ತತ್ವಗಳನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ವಿ. ರಾಜು ಮಾತನಾಡಿ, ಅರಸು ಅವರ ಕ್ರಾಂತಿಕಾರಿ ಕ್ರಮಗಳಿಂದ ಹಿಂದುಳಿದ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಅವಕಾಶ ದೊರೆಯಿತು. ನಗರದಲ್ಲಿರುವ ಅರಸು ಭವನದ ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವಿನ್ ಆರ್. ಸ್ವಾಗತಿಸಿದರು. ವಿವಿಧ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
