ಶಿವಮೊಗ್ಗ: ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನದ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ರಾಜ್ಯಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಶಿವಮೊಗ್ಗ ಜಿಲ್ಲಾ ಸಂಚಾಲಕ ಜನಾಬ್ ಅಕ್ರಮುಲ್ಲಾ ಶರೀಫ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ರಾಂತಿಯ ಜ್ಯೋತಿ: ಪ್ರವಾದಿ’ ಎಂಬ ಶೀರ್ಷಿಕೆಯಡಿ ಅಭಿಯಾನ ನಡೆಯಲಿದ್ದು, ಪ್ರವಾದಿ ಮುಹಮ್ಮದ್ ಅವರ ಜೀವನ, ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ಪರಿಚಯಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.
ಪ್ರವಾದಿ ಮುಹಮ್ಮದ್ ಅವರು ಜಗತ್ತಿನಲ್ಲಿ ತಂದ ಸಮಗ್ರ ಕ್ರಾಂತಿಯು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆಯ ಮೇಲೆ ಸ್ಥಾಪಿತವಾಗಿತ್ತು. ಅವರ ಸಂದೇಶವು ಜನರ ಮನಸ್ಸನ್ನು ಸಂಸ್ಕರಿಸಿ, ನೈತಿಕತೆ ಮತ್ತು ಚಾರಿತ್ರ್ಯವನ್ನು ಶುದ್ಧೀಕರಿಸುವ ಮೂಲಕ ವ್ಯಕ್ತಿ ಹಾಗೂ ಸಮಾಜದ ಪರಿವರ್ತನೆಗೆ ಕಾರಣವಾಯಿತು ಎಂದು ಹೇಳಿದರು.
ಅವರ ಕ್ರಾಂತಿಯು ಅಪ್ಪಟ ಮಾನವೀಯ ಕ್ರಾಂತಿಯಾಗಿದ್ದು, ಮಾನವ ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಮಾರ್ಗದರ್ಶನ ನೀಡಿದೆ. ಸುಭಿಕ್ಷೆ ಮತ್ತು ನಿರ್ಭಯತ್ವದ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು ಎಂದು ಅಕ್ರಮುಲ್ಲಾ ಶರೀಫ್ ವಿವರಿಸಿದರು.
ತಪ್ಪು ಕಲ್ಪನೆ ನಿವಾರಣೆ, ಬಾಂಧವ್ಯ ಬಲಪಡಿಸುವ ಗುರಿ
ಪ್ರವಾದಿ ಮುಹಮ್ಮದ್ ಅವರ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ವಿವಿಧ ಸಮುದಾಯಗಳ ನಡುವೆ ಪರಸ್ಪರ ಬಾಂಧವ್ಯ ಹಾಗೂ ಸೌಹಾರ್ದವನ್ನು ಬಲಪಡಿಸುವುದು ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ ಎಂದು ಅವರು ತಿಳಿಸಿದರು.
ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ವೈಯಕ್ತಿಕ ಭೇಟಿ, ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ ಕಾರ್ಯಕ್ರಮ, ಚರ್ಚಾಗೋಷ್ಠಿ, ಸೀರತ್ ಪ್ರವಚನ, ಸೀರತ್ ಎಕ್ಸಿಬಿಷನ್, ಸಮಾಜಸೇವಾ ಚಟುವಟಿಕೆಗಳು ಹಾಗೂ ಸೌಹಾರ್ದ ಸಂದೇಶ ರ್ಯಾಲಿಗಳು ನಡೆಯಲಿವೆ ಎಂದರು.
ಎರಡು ಕೃತಿಗಳ ಬಿಡುಗಡೆ
ಅಭಿಯಾನದ ಪ್ರಯುಕ್ತ ಪ್ರವಾದಿ ಮುಹಮ್ಮದ್ ಅವರ ಸಂದೇಶಗಳನ್ನು ಪರಿಚಯಿಸುವ ಎರಡು ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು ಎಂದು ಅಕ್ರಮುಲ್ಲಾ ಶರೀಫ್ ತಿಳಿಸಿದರು.
ಸಾಹಿತಿ ಹಾಗೂ ಗ್ರಂಥಕರ್ತ ಯೋಗೇಶ್ ಮಾಸ್ಟರ್ ಅವರು ಬರೆದ ‘ಮಾನವ ಮನಸ್ಸಿನ ಕೃಷಿಕ – ಮನದೊಡೆಯ ಪ್ರವಾದಿ ಮುಹಮ್ಮದ್’ ಹಾಗೂ ವಾರ್ತಾ ಭಾರತಿಯ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಅವರು ಬರೆದ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್’ ಕೃತಿಗಳು ಅಭಿಯಾನದ ಸಂದರ್ಭದಲ್ಲಿ ಜನರಿಗೆ ಪರಿಚಯವಾಗಲಿವೆ ಎಂದರು.
ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮ
ಸ್ಥಳೀಯವಾಗಿ ಸೀರತ್ ಸಂವಾದ ಕಾರ್ಯಕ್ರಮ, ವಿಚಾರಗೋಷ್ಠಿ, ಗೆಟ್-ಟುಗೆದರ್, ಅಂತರ್ಧರ್ಮೀಯ ಸಂವಾದ, ಪ್ರಬಂಧ ಸ್ಪರ್ಧೆ, ರಕ್ತದಾನ ಶಿಬಿರ, ಆಸ್ಪತ್ರೆಗಳಲ್ಲಿ ರೋಗಿಗಳ ಭೇಟಿ ಹಾಗೂ ವೃದ್ಧಾಶ್ರಮಗಳ ಭೇಟಿ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಅಭಿಯಾನದ ಮೂಲಕ ಪ್ರವಾದಿ ಮುಹಮ್ಮದ್ ಅವರ ಮಾನವೀಯ ಸಂದೇಶಗಳನ್ನು ಜನರಿಗೆ ತಲುಪಿಸುವುದರ ಜೊತೆಗೆ, ಸಮಾಜದಲ್ಲಿ ಸೌಹಾರ್ದ, ಪರಸ್ಪರ ಗೌರವ, ಮಾನವೀಯತೆ ಮತ್ತು ಸಹಬಾಳ್ವೆಯ ಮನೋಭಾವವನ್ನು ಬಲಪಡಿಸುವ ಪ್ರಯತ್ನ ಮಾಡಲಾಗುವುದು ಎಂದು ಅಕ್ರಮುಲ್ಲಾ ಶರೀಫ್ ತಿಳಿಸಿದರು.
