ಜನ ನೋಟ
ಕ್ರೈಂ ನ್ಯೂಸ್

ತಾತನನ್ನೇ ಕೊಲೆ ಮಾಡಿಸಿದ 13 ವರ್ಷದ ಬಾಲಕಿ!

ವರದಿ : ಸನತ್ ಶಿವಮೊಗ್ಗ 

ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾದ್ ಬಳಿಯ ಕರುವಾಟದಲ್ಲಿ ನಡೆದ ವೃದ್ಧನ ಭೀಕರ ಹತ್ಯೆ, ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಈ ಹತ್ಯೆಯ ರೂವಾರಿ 13 ವರ್ಷದ ಮೊಮ್ಮಗಳಾಗಿದ್ದು, ತನ್ನ ಪ್ರಿಯಕರ ಮತ್ತು ಆತನ ಇಬ್ಬರು ಸ್ನೇಹಿತರನ್ನು ಬಳಸಿ ತನ್ನ ಅಜ್ಜನನ್ನು ಭೀಕರವಾಗಿ ಹತ್ಯೆ ಮಾಡಿಸಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಈ ಕೊಲೆ ನಡೆಸಿರುವುದು ಕೇವಲ ಐಫೋನ್ ಹಾಗೂ ಬೈಕ್ ಖರೀದಿಸುವ ದುರಾಸೆಗೆ ಎನ್ನುವುದು ಬೆಳಕಿಗೆ ಬಂದಿದೆ.

67 ವರ್ಷದ ಶಿವನ್ ಕುಟ್ಟಿ ಚೆಟ್ಟಿಯಾರ್ ಹತ್ಯೆಯಾದ ವೃದ್ಧ, ಶಿವನ್ ಕುಟ್ಟಿ ಅವರು ಕೊಲ್ಲಂ ಮೂಲದವರಾಗಿದ್ದು, ಎರಡು ವರ್ಷಗಳ ಹಿಂದೆಯಷ್ಟೇ ಕರುವಾಟದಲ್ಲಿ ಬಾಡಿಗೆ ಮನೆಗೆ ಬಂದು ನೆಲೆಸಿದ್ದರು. ಅವರ ಕಿರಿಯ ಮಗಳ ಹೆರಿಗೆಗಾಗಿ ಪತ್ನಿ ಆಸ್ಪತ್ರೆಯಲ್ಲಿದ್ದಾಗ, ಆಗಸ್ಟ್ 15ರ ರಾತ್ರಿ ಶಿವನ್ ಕುಟ್ಟಿ ಮನೆಯಲ್ಲಿ ಒಬ್ಬರೇ ಇದ್ದರು. ಇದನ್ನೇ ಕಾಯುತ್ತಿದ್ದ 13 ವರ್ಷದ ಮೊಮ್ಮಗಳು, ತನ್ನ 17 ವರ್ಷದ ಪ್ರೇಮಿ ಹಾಗೂ ಆತನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಭೀಕರ ಕೊಲೆಗೆ ಸ್ಕೆಚ್ ಹಾಕಿದ್ದಳು. ದರೋಡೆ ಮಾಡಿದ ಚಿನ್ನ ಮಾರಿ ತನಗೆ ಐಫೋನ್ ಮತ್ತು ಪ್ರೇಮಿಗೆ ಬೈಕ್ ಖರೀದಿಸುವುದು ಇವರ ಯೋಜನೆಯಾಗಿತ್ತು.

ಮೊಮ್ಮಗಳ ಮಾರ್ಗದರ್ಶನದಂತೆ ಮನೆಯ ವೆಂಟಿಲೇಟರ್ ಮೂಲಕ ಒಳನುಗ್ಗಿದ ಮೂವರು ಅಪ್ರಾಪ್ತ ಹುಡುಗರು, ಶಿವನ್ ಕುಟ್ಟಿ ಅವರ ಕೈಕಾಲುಗಳನ್ನು ಕಟ್ಟಿ, ತಲೆಯನ್ನು ಗೋಡೆಗೆ ಜಜ್ಜಿ, ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಕೃತ್ಯ ಎಸಗಿದ ತಕ್ಷಣ ಆರೋಪಿಗಳು ಕೊಲೆಯ ದೃಶ್ಯವನ್ನು ಬಾಲಕಿಗೆ ವೀಡಿಯೊ ಕಾಲ್ ಮಾಡಿ ತೋರಿಸಿದ್ದಾರೆ. ಅಲ್ಲದೇ, ತನಿಖೆಯ ದಿಕ್ಕು ತಪ್ಪಿಸಲು ಘಟನಾ ಸ್ಥಳದಲ್ಲಿ ಖಾರದ ಪುಡಿ ಎರಚಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದರು.

ಕೊಲೆಯಾದ ಮರುದಿನ ಈ ಬಾಲಕಿ ಯಾವುದೇ ಆತಂಕವಿಲ್ಲದೆ ಅಂಗಡಿಗೆ ಹೋಗಿ ಚಿಪ್ಸ್ ಖರೀದಿಸಿದ್ದಳು, ಅಂಗಡಿಯವರು ಕೇಳಿದಾಗ ಅಜ್ಜ ಕುಡಿದು ಮಲಗಿರಬಹುದು ಎಂದು ಹೇಳಿದ್ದಳಂತೆ!.

ಆರಂಭದಲ್ಲಿ ಇದೊಂದು ದರೋಡೆ ಎಂದು ಶಂಕಿಸಲಾಗಿತ್ತಾದರೂ, ವಿಚಾರಣೆ ವೇಳೆ 13 ವರ್ಷದ ಬಾಲಕಿಯ ಹೇಳಿಕೆಗಳಲ್ಲಿ ವೈರುಧ್ಯಗಳು ಕಂಡುಬಂದವು. ಪೊಲೀಸರು ಆಕೆಯ ಫೋನ್ ಕರೆಗಳ ದಾಖಲೆಗಳನ್ನು ಆಧರಿಸಿ ತೀವ್ರ ವಿಚಾರಣೆ ನಡೆಸಿದಾಗ ಸಂಚು ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಸೇರಿದಂತೆ ನಾಲ್ವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದ್ದು, ಕಳವು ಮಾಡಲಾಗಿದ್ದ ಸುಮಾರು 4.5 ಪವನ್ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Related posts

ಶಾಲೆಯಲ್ಲಿ ಹಾವು ಕಚ್ಚಿ ಮೂವರು ಬಾಲಕಿಯರು ಸಾವು

JanaNota Editor

ಮದುವೆಯಾಗಲು ನಿರಾಕರಿಸಿದ ಯುವತಿಗೆ ಜೀವ ಬೆದರಿಕೆ , ಕುಟುಂಬದವರನ್ನು ಕೊಲ್ಲುವ ಬೆದರಿಕೆ, ಅಪಹರಣ

JanaNota Editor

ಕಾರಿಗೆ ಟಚ್ ಆಗಿದ್ದನ್ನು ಪ್ರಶ್ನಿಸಿದಕ್ಕೆ ಶಿವಮೊಗ್ಗದ ಉದ್ಯಮಿ ಒಬ್ಬರಿಗೆ ಹಲ್ಲೆ, ಸುಲಿಗೆ

JanaNota Editor