ಶಿವಮೊಗ್ಗ: ಮದುವೆಯಾಗಲು ನಿರಾಕರಿಸಿದ ಯುವತಿಗೆ ಜೀವ ಬೆದರಿಕೆ ಹಾಕಿ, ಆಕೆಯ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಸಿ, ಬಲವಂತವಾಗಿ ಕರೆದೊಯ್ದು ಅಕ್ರಮವಾಗಿ
ಬಂಧನದಲ್ಲಿಟ್ಟ ಆರೋಪದ ಸಂಬಂಧ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಯಲ್ಲಿ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ವಿನೋಬನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 165/2026ರಡಿ ಆಗಸ್ಟ್ 11ರಂದು ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದ 23 ವರ್ಷದ ಯುವತಿ
ಶಿವಮೊಗ್ಗದಲ್ಲಿರುವ ಕ್ಲಿನಿಕ್‌ವೊಂದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಶಿವಮೊಗ್ಗದ ಪಿಜಿಯಲ್ಲಿ ವಾಸವಾಗಿದ್ದರು.
ಆಕೆಗೆ ಪ್ರಕರಣದ ಮೊದಲ ಆರೋಪಿ ಪ್ರಶಾಂತ್ ನಾಯ್ಕ ಎಂಬಾತನೊಂದಿಗೆ ಪರಸ್ಪರ ಪ್ರೀತಿಯ ಸಂಬಂಧವಿತ್ತು ಎಂದು ದೂರಿನಲ್ಲಿ
ಉಲ್ಲೇಖಿಸಲಾಗಿದೆ. ಯುವತಿ ಶಿವಮೊಗ್ಗದಲ್ಲಿದ್ದ ಸಂದರ್ಭದಲ್ಲಿ ಆರೋಪಿ ಆಕೆಯ ಮೊಬೈಲ್‌ಗೆ ಕರೆ ಮಾಡಿ ತನ್ನನ್ನು ಮದುವೆಯಾಗುವಂತೆ
ಒತ್ತಾಯಿಸುತ್ತಿದ್ದ. ಆದರೆ ಯುವತಿ
ಮದುವೆಯಾಗಲು ನಿರಾಕರಿಸಿದ್ದಾಳೆ ಎನ್ನಲಾಗಿದೆ.
*ಕುಟುಂಬದವರಿಗೆ ಕೊಲೆ ಬೆದರಿಕೆ ಆರೋಪ*
ಮದುವೆಗೆ ಒಪ್ಪದಿದ್ದರೆ ಯುವತಿಯ ತಂದೆ-ತಾಯಿ, ಸಹೋದರ ಹಾಗೂ ಸಹೋದರಿಯನ್ನು ಸುಮ್ಮನೆ ಬಿಡುವುದಿಲ್ಲ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಯುವತಿಯ ಕುಟುಂಬದವರ ಹೆಸರನ್ನು ಬರೆದಿಟ್ಟು ಹೋಗುವುದಾಗಿ ಕೂಡ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ನಡುವೆ ಯುವತಿಯ ಅಕ್ಕನ ಮದುವೆ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಮದುವೆಯನ್ನು ನಿಲ್ಲಿಸುವುದಾಗಿ ಹಾಗೂ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿಯೊಂದಿಗೆ ತೆಗೆಸಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುವುದಾಗಿ ಮೊದಲ ಆರೆ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ವಿಚಾರವಾಗಿ ಯುವತಿಯ ತಂದೆ-ತಾಯಿ ಮೊದಲ ಆರೋಪಿಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದರೂ, ಆತ ಇದೇ ರೀತಿಯ ವರ್ತನೆಯನ್ನು ಮುಂದುವರಿಸಿದ್ದಾನೆ ಎಂದು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಯುವತಿ ಶಿವಮೊಗ್ಗದಲ್ಲಿದ್ದ ವೇಳೆ ಮೊದಲ ಆರೋಪಿ ಕರೆ ಮಾಡಿ, ಯುವತಿಯ ಸಹೋದರ ಒಬ್ಬನೇ ಕಾರಿನಲ್ಲಿ ಹೋಗುತ್ತಿದ್ದು, ಆತನನ್ನು ಕೊಲೆ ಮಾಡಲು ತನ್ನ ಕಡೆಯ ಹುಡುಗರನ್ನು ಕಳುಹಿಸಿರುವುದಾಗಿ ಹೇಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಂತರ ಯುವತಿಯನ್ನು ಕ್ಲಿನಿಕ್‌ನಿಂದ ಹೊರಗೆ ಬರುವಂತೆ ಹೇಳಿದ್ದು ಆಕೆ ಹೊರಗೆ ಬಂದಾಗ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು, ತನ್ನೊಂದಿಗೆ ಬಾರದಿದ್ದರೆ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಸಿ ಬೈಕ್‌ನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶಿಕಾರಿಪುರದ ಲಾಡ್ಜ್‌ನಲ್ಲಿ ಅಕ್ರಮ ಬಂಧನ ಆರೋಪ
ಯುವತಿಯನ್ನು ಶಿಕಾರಿಪುರ ಪಟ್ಟಣದ ಶಿಶುವಿಹಾರ ರಸ್ತೆಯಲ್ಲಿರುವ ಲಾಡ್ಜ್‌ವೊಂದಕ್ಕೆ ಕರೆದೊಯ್ದು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಸ್ವಲ್ಪ ಸಮಯದ ಬಳಿಕ ಮೊದಲ ಆರೋಪಿಯ ಸ್ನೇಹಿತರೆಂದು ಹೇಳಲಾದ ಎರಡನೇ
ಆರೋಪಿಯಿಂದ ಹತ್ತನೇ ಆರೋಪಿಯವರೆಗೆ ಒಟ್ಟು ಒಂಬತ್ತು ಮಂದಿ ಅಲ್ಲಿಗೆ ಬಂದಿದ್ದಾರೆ. ಮದುವೆಯಾಗದಿದ್ದರೆ ಯುವತಿ ಮತ್ತು ಮೊದಲ ಆರೋಪಿಯ ಬಗ್ಗೆ ಅಪಪ್ರಚಾರ ಮಾಡುವುದಾಗಿ ಎಲ್ಲರೂ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಂತರ ಯುವತಿ ಮತ್ತು ಮೊದಲ ಆರೋಪಿಯನ್ನು ಕೆಎ-02 ಎಂಎಫ್-1647 ನೋಂದಣಿ ಸಂಖ್ಯೆಯ ಕಾರಿನಲ್ಲಿ ಶಿವಮೊಗ್ಗದ ಕಡೆಗೆ ಕರೆದುಕೊಂಡು ಬರುತ್ತಿದ್ದವೇಳೆ, ಯುವತಿ ತನ್ನ ತಂದೆಗೆ ಕರೆ ಮಾಡಿದ್ದಾಳೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಬಂಜಾರ ಭವನದ ಸಮೀಪ ಮೊದಲ ಆರೋಪಿ ಯುವತಿಯ ತುಟಿಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಯುವತಿಯ ತಂದೆ ಭೀಮಾನಾಯ್ಕ ಅವರು 112 ಸಹಾಯವಾಣಿಗೆ ಕರೆ ಮಾಡಿದ್ದರು.
112 ವಾಹನದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಯುವತಿ ಹಾಗೂ ಆರೋಪಿಗಳನ್ನು ಶಿಕಾರಿಪುರ ಟೌನ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಬಳಿಕ ಮರುದಿನ ಬರುವಂತೆ ತಿಳಿಸಿ
ಎಲ್ಲರನ್ನೂ ಕಳುಹಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಆದರೆ ಆರೋಪಿಗಳಿಂದ ತಮ್ಮ ತಂದೆ, ತಾಯಿ, ಅಕ್ಕ ಹಾಗೂ ಸಹೋದರನಿಗೆ ಯಾವ ಸಮಯದಲ್ಲಿ ಏನು ಅಪಾಯವಾಗಬಹುದು ಎಂಬ ಭಯದಿಂದ ಯುವತಿ ತಕ್ಷಣ ದೂರು ನೀಡದೆ, ಕೆಲ ದಿನಗಳ ಬಳಿಕ ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.
*10 ಮಂದಿ ವಿರುದ್ಧ ಪ್ರಕರಣ*
ದೂರಿನ ಆಧಾರದ ಮೇಲೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ಮೊದಲು Zero FIR ದಾಖಲಿಸಿದ್ದಾರೆ. ಘಟನೆ ನಡೆದ ಸ್ಥಳ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ವಿನೋಬನಗರ ಠಾಣೆಗೆ ವರ್ಗಾಯಿಸಲಾಗಿದೆ.
ಪ್ರಕರಣದಲ್ಲಿ ಪ್ರಶಾಂತ್ ನಾಯ್ಕ (A1), ನಾಗ ನಾಯ್ಕ್ಕ್ (A2), ಸಕ್ರ್ಯಾ ನಾಯ್ಕ (A3 ಕೇಶವ ನಾಯ್ಕ (A4), ಪವನ್ (A5), ಸೋಮ (A6). ಅಮರ್ (A7), ಹರೀಶ್ (A8), ಮುತ್ತು
A9) ಮತ್ತು ಮಂಜು (A10) ಸೇರಿದಂತೆ ಒಟ್ಟು 10 ಮಂದಿಯನ್ನು ಆರೋಪಿಗಳಾಗಿ ದಾಖಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ 0% (BNS) 20238 115(2), 127(2), 137(2), 189(2), 190, 191(2), 351(2) ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಶಿವಮೊಗ್ಗದ ಕ್ಲಿನಿಕ್ ಎದುರಿನ ರಸ್ತೆಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ವಿನೋಬನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
