ಭಾರತದ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಇನ್ನೂ ಕೆಲವು ಸ್ಟಾರ್ ನಟರು ಗುಟ್ಕಾ ಜಾಹೀರಾತಿನಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ನೆರೆಯ ಮಹಾರಾಷ್ಟ್ರ ಸರ್ಕಾರವು ಇಂಥಹಾ ನಟರಿಗೆ ಶಾಕ್ ನೀಡಿದೆ.
ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು (FDA) ಬಾಲಿವುಡ್ ನಟರಾದ ಅಜಯ್ ದೇವಗನ್, ಶಾರುಖ್ ಖಾನ್ ಮತ್ತು ಟೈಗರ್ ಶ್ರಾಫ್ ಅವರಿಗೆ ‘ವಿಮಲ್’ ಜಾಹೀರಾತಿನಲ್ಲಿ ನಟಿಸುತ್ತಿರುವ ಕುರಿತು ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ರಾಜ್ಯದಲ್ಲಿ ನಿಷೇಧಿತ ಉತ್ಪನ್ನವಾದ ‘ವಿಮಲ್ ಪಾನ್ ಮಸಾಲ’ದ ಪರವಾಗಿ ಇದು ಪರೋಕ್ಷ ಜಾಹೀರಾತಿಗೆ ಸಮನಾಗಿದೆ ಎಂದು ಎಫ್ಡಿಎ ಆರೋಪಿಸಿದೆ.
ಮಹಾರಾಷ್ಟ್ರದಲ್ಲಿ ತಂಬಾಕು ಮತ್ತು ಪಾನ್ ಮಸಾಲ ಮಾರಾಟ ಹಾಗೂ ಪ್ರಚಾರದ ವಿರುದ್ಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು ಕ್ರಮ ಜರುಗಿಸುತ್ತಿದೆ. ಇದೀಗ ಈ ಮೂವರು ನಟರು ನಿಯಂತ್ರಕರ ಪರಿಶೀಲನೆಗೆ ಒಳಪಟ್ಟಿದ್ದಾರೆ. ತಮ್ಮ ವಿರುದ್ಧ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂಬುದಕ್ಕೆ 15 ದಿನಗಳೊಳಗೆ ಲಿಖಿತ ವಿವರಣೆ ನೀಡುವಂತೆ ನಟರಿಗೆ ನೊಟೀಸ್ ಮೂಲಕ ಸೂಚಿಸಲಾಗಿದೆ.
FDA ಈ ಪ್ರಕರಣದಲ್ಲಿ ಮೊದಲ ಬಾರಿಗೆ ಪರೋಕ್ಷ ಜಾಹೀರಾತಿನ ಬಗ್ಗೆ ತನಿಖೆ ನಡೆಸುತ್ತಿದೆ. ಈ ಮೂವರು ನಟರು ಬ್ರ್ಯಾಂಡ್ ರಾಯಭಾರಿಗಳಾಗಿ ಜಾಹೀರಾತಿನಲ್ಲಿ ಭಾಗವಹಿಸಿದ್ದರು. ಮಹಾರಾಷ್ಟ್ರದಲ್ಲಿ 2012 ರಿಂದ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲವನ್ನು ನಿಷೇಧಿಸಲಾಗಿದೆ. ಆಯುಕ್ತ ತುಕಾರಾಂ ಮುಂಧೆ ಅವರ ನೇತೃತ್ವದಲ್ಲಿ, ಮಹಾರಾಷ್ಟ್ರ FDA ತಂಬಾಕು ಮಾರಾಟ ಮತ್ತು ಪ್ರಚಾರದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
