ಜನ ನೋಟ
Headlines

ಪ್ರವಾಹದ ನೀರಿನ ಮೀನು ತಿನ್ನದಂತೆ ಬಿಹಾರ ಸರ್ಕಾರ ಎಚ್ಚರಿಕೆ

ಪಾಟ್ನಾ: ನೇಪಾಲದಲ್ಲಿ ಸಂಭವಿಸಿದ ಜಲಪ್ರಳಯದ ಬಳಿಕ ಬಿಹಾರದ ಉತ್ತರ ಭಾಗಗಳಿಗೆ ಪ್ರವಾಹದ ನೀರು ಭಾರಿ ಪ್ರಮಾಣದಲ್ಲಿ ಹರಿದುಬರುತ್ತಿದ್ದು, ಈ ನೀರಿನಲ್ಲಿ ಸಿಗುವ ಮೀನುಗಳನ್ನು ಸೇವಿಸದಂತೆ ಬಿಹಾರ ಸರ್ಕಾರ ಸಾರ್ವಜನಿಕರಿಗೆ ತೀವ್ರ ಎಚ್ಚರಿಕೆ ನೀಡಿದೆ.

ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಪ್ರವಾಹದ ನೀರಿನಲ್ಲಿ ಮೀನು ಹಿಡಿಯುವುದು, ಮಾರಾಟ ಮಾಡುವುದು ಹಾಗೂ ಅವುಗಳನ್ನು ಆಹಾರವಾಗಿ ಸೇವಿಸುವುದನ್ನು ಸಂಪೂರ್ಣವಾಗಿ ತಪ್ಪಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ತ್ರಿಶೂಲಿ ನದಿಯ ನೀರು ಗಂಡಕ್ ಹಾಗೂ ಕೋಸಿ ನದಿಗಳ ಮೂಲಕ ಬಿಹಾರದ ಹಲವು ಪ್ರದೇಶಗಳಿಗೆ ಹರಿದುಬಂದಿದ್ದು, ಪ್ರವಾಹದ ರಭಸದಲ್ಲಿ ಅಪರೂಪದ ಮೀನುಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಮೀನುಗಳನ್ನು ಸೇವಿಸಿದ ಕೆಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಹಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಂಪನ್ಮೂಲ ಇಲಾಖೆ ಹಾಗೂ ನೇಪಾಲ ಪೊಲೀಸರು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಪ್ರವಾಹದ ವೇಳೆ ಕೊಳಗಳು, ನದಿಗಳು ಮತ್ತು ಜಲಾಶಯಗಳಿಂದ ಕೊಚ್ಚಿಕೊಂಡು ಬರುವ ಮೀನುಗಳು ಕೊಳಚೆ ನೀರು, ಚರಂಡಿ ತ್ಯಾಜ್ಯ ಹಾಗೂ ಕೊಳೆತ ಪ್ರಾಣಿಗಳ ಸಂಪರ್ಕಕ್ಕೆ ಬರುವ ಸಾಧ್ಯತೆಯಿದೆ. ಇದರಿಂದ ಅವುಗಳಲ್ಲಿ ಬ್ಯಾಕ್ಟೀರಿಯಾ, ವೈರಸ್ ಸೇರಿದಂತೆ ಅಪಾಯಕಾರಿ ರೋಗಾಣುಗಳು ಸೇರಿಕೊಳ್ಳುವ ಸಾಧ್ಯತೆ ಇರುವುದರಿಂದ, ಸದ್ಯಕ್ಕೆ ಇಂತಹ ಮೀನುಗಳನ್ನು ಸೇವಿಸದಂತೆ ಸೂಚಿಸಲಾಗಿದೆ.

ಇದೇ ವೇಳೆ ನೇಪಾಲದ ಗುಡ್ಡಗಾಡು ಪ್ರದೇಶಗಳ ಭೂಕುಸಿತ ಹಾಗೂ ಹಿಮನದಿ ಸ್ಫೋಟದಿಂದ ಅಪಾರ ಪ್ರಮಾಣದ ಕೆಸರು, ಮಣ್ಣು, ಕಲ್ಲು, ಮರದ ದಿಮ್ಮಿಗಳು ಸೇರಿದಂತೆ ಸೇತುವೆಗಳು, ಜಲವಿದ್ಯುತ್ ಯೋಜನೆಗಳ ಅವಶೇಷಗಳು, ವಾಹನಗಳು, ಮನೆಬಳಕೆಯ ವಸ್ತುಗಳು ಹಾಗೂ ಎಲ್‌ಪಿಜಿ ಸಿಲಿಂಡರ್‌ಗಳು ನದಿಯಲ್ಲಿ ಕೊಚ್ಚಿಕೊಂಡು ಬರುತ್ತಿವೆ. ಮಾನವರು ಹಾಗೂ ಪ್ರಾಣಿಗಳ ಮೃತದೇಹಗಳು ಕೂಡ ನೀರಿನಲ್ಲಿ ತೇಲಿ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕಲುಷಿತ ಪ್ರವಾಹದ ನೀರು ಬೋರ್‌ವೆಲ್ ಮತ್ತು ಬಾವಿಗಳ ಕುಡಿಯುವ ನೀರಿನೊಂದಿಗೆ ಬೆರೆತರೆ ಅತಿಸಾರ, ಕಾಲರಾ, ಟೈಫಾಯಿಡ್, ಹೆಪಟೈಟಿಸ್ ಎ ಮತ್ತು ಇ ಸೇರಿದಂತೆ ಹಲವು ಕಾಯಿಲೆಗಳು ಹರಡುವ ಅಪಾಯವಿದೆ. ನೀರು ನಿಂತ ಪ್ರದೇಶಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳ ಆತಂಕವೂ ಎದುರಾಗಿದೆ.

ಪ್ರವಾಹದಿಂದ ಗಡಿ ಜಿಲ್ಲೆಗಳ ಕೃಷಿ ಭೂಮಿಯೂ ಜಲಾವೃತವಾಗಿದ್ದು, ಮುಂದಿನ ದಿನಗಳಲ್ಲಿ ಧಾನ್ಯ ಮತ್ತು ತರಕಾರಿಗಳ ಕೊರತೆ ಉಂಟಾಗುವ ಸಾಧ್ಯತೆಯಿದೆ. ನದಿಗಳ ನೀರಿನ ಮಟ್ಟ ಇಳಿದು ಪರಿಸ್ಥಿತಿ ಸಹಜವಾಗುವವರೆಗೆ ಸಾರ್ವಜನಿಕರು ಪ್ರವಾಹದ ನೀರಿನಿಂದ ದೂರವಿದ್ದು, ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Related posts

8 ತಿಂಗಳ ಕಂದನ ಡೈಪರ್‌ನಲ್ಲಿ ಚಿನ್ನ : ಕಳ್ಳಸಾಗಣೆಗೆ ಹೊಸ ದಾರಿ

JanaNota Editor

₹10 ಕೋಟಿ ಮೌಲ್ಯದ ಆಸ್ತಿ ಒಡೆಯ ವೈಭವ್ ಸೂರ್ಯವಂಶಿ

JanaNota Editor

ಕುಡಿಯುವ ನೀರಿನ ವಿಚಾರಕ್ಕೆ ಆರಂಭವಾದ ಜಗಳ : ಕೋಚ್ ಹತ್ಯೆಯಲ್ಲಿ ಅಂತ್ಯ

JanaNota Editor