ನವದೆಹಲಿ, ಆ. 7: ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಸಂಸದರು ಮತ್ತು ಕ್ಯಾಂಪ್ಕೋ (CAMPCO) ಪ್ರತಿನಿಧಿಗಳ ನಿಯೋಗ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಅಕ್ರಮ ಅಡಿಕೆ ಆಮದು ಮತ್ತು ಕಳ್ಳಸಾಗಣೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಸೇರಿದಂತೆ ಇತರ ಪ್ರತಿನಿಧಿಗಳು ಭಾಗವಹಿಸಿದ್ದರು.
ದೇಶೀಯ ಅಡಿಕೆ ಬೆಳೆಗಾರರು ಅಕ್ರಮ ಅಡಿಕೆ ಆಮದಿನಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಕರ್ನಾಟಕ ಸೇರಿದಂತೆ ಅಡಿಕೆ ಬೆಳೆಯುವ ರಾಜ್ಯಗಳ ಲಕ್ಷಾಂತರ ರೈತ ಕುಟುಂಬಗಳ ಹಿತಾಸಕ್ತಿಯನ್ನು ಕಾಪಾಡಲು ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿತು.
ಅಡಿಕೆ ಬೆಳೆಗಾರರು ಈಗಾಗಲೇ ಬೆಳೆ ರೋಗಗಳು, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಮತ್ತು ಇಳಿಮುಖವಾಗುತ್ತಿರುವ ಉತ್ಪಾದಕತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಕ್ರಮ ಆಮದು ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ನಿಯೋಗ ಗಮನ ಸೆಳೆಯಿತು.
ವಿದೇಶಿ ಅಡಕೆಯನ್ನು ಗಡಿ, ಬಂದರು ಹಾಗೂ ಇತರ ಮಾರ್ಗಗಳ ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿದೆ. ITC (HS) Code 20081991 ಅಡಿಯಲ್ಲಿ ‘ಹುರಿದ ಒಣಹಣ್ಣುಗಳು ಮತ್ತು ಬೀಜಗಳು’ ಎಂದು ಘೋಷಿಸಲಾಗುತ್ತಿರುವ ಸರಕುಗಳ ಸೂಕ್ಷ್ಮ ಪರಿಶೀಲನೆ ನಡೆಸಬೇಕು ಎಂದು ನಿಯೋಗ ಒತ್ತಾಯಿಸಿತು. ಸುರಕ್ಷತಾ ನಿಯಮಗಳನ್ನು ತಪ್ಪಿಸಲು ಸಂಸ್ಕರಿತ ಉತ್ಪನ್ನಗಳೆಂದು ತಪ್ಪು ಘೋಷಣೆ ಮಾಡಲಾಗುತ್ತಿದೆ ಎಂಬ ರೈತರ ಆತಂಕವನ್ನೂ ಅಮಿತ್ ಶಾ ಅವರ ಗಮನಕ್ಕೆ ತರಲಾಯಿತು.
ಪ್ರತಿ ಕೆಜಿಗೆ ₹351 ಕನಿಷ್ಠ ಆಮದು ಬೆಲೆ (Minimum Import Price – MIP) ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ಅಡಿಕೆಯ ಮೂಲ ದೇಶ, ಘೋಷಿತ ಮೌಲ್ಯ ಹಾಗೂ ಆಮದು ಮಾರ್ಗಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ನಿಯೋಗ ಆಗ್ರಹಿಸಿತು.

ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು, ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದರು. ಕನಿಷ್ಠ ಆಮದು ಬೆಲೆ ಸೇರಿದಂತೆ ರೈತಪರ ನೀತಿಗಳು ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ದೇಶದೊಳಗೆ ಅಕ್ರಮ ಅಡಿಕೆ ಪ್ರವೇಶ ತಡೆಯಲು ಗೃಹ ವ್ಯವಹಾರಗಳ ಸಚಿವಾಲಯ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಹಣಕಾಸು ಸಚಿವಾಲಯ, ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC), ಕಂದಾಯ ಗುಪ್ತಚರ ನಿರ್ದೇಶನಾಲಯ (DRI), ಕಸ್ಟಮ್ಸ್ ಇಲಾಖೆ ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ವ್ಯವಸ್ಥಿತ ಕಾರ್ಯತಂತ್ರ ರೂಪಿಸುವಂತೆ ನಿಯೋಗ ಮನವಿ ಮಾಡಿತು.
“ನಮ್ಮ ರೈತರು ಯಾವುದೇ ವಿಶೇಷ ಸೌಲಭ್ಯವನ್ನು ಕೇಳುತ್ತಿಲ್ಲ. ನ್ಯಾಯಯುತ ಮಾರುಕಟ್ಟೆ ಮತ್ತು ಜಾರಿಯಲ್ಲಿರುವ ಕಾನೂನುಗಳ ಕಟ್ಟುನಿಟ್ಟಿನ ಅನುಷ್ಠಾನವನ್ನು ಮಾತ್ರ ಬಯಸುತ್ತಿದ್ದಾರೆ,” ಎಂದು ನಿಯೋಗ ತಿಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ದೇಶದ ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಸೂಕ್ತ ರಕ್ಷಣೆ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿತು.
