ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡಲು ಜಿಲ್ಲಾಡಳಿತ ಕಳೆದ ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದು, 70ಕ್ಕೂ ಅಧಿಕ ಮಳೆ ಮಾಪನ ಕೇಂದ್ರಗಳನ್ನು ದುರಸ್ಥಿ ಮಾಡಬೇಕಾಗಿದೆ.
ಜಿಲ್ಲೆಯ ಎಲ್ಲಾ ಗ್ರಾಪಂ ಹಂತದಲ್ಲಿ ಮಳೆ ಮಾಪಕವನ್ನು ಅಳವಡಿಸಲಾಗಿತ್ತು. ಆದರೆ ಕಳೆದ ವರ್ಷಗಳಿಂದ ಬಹುತೇಕ ಮಳೆ ಮಾಪಕಗಳು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿವೆ. ಇನ್ನೂ ಕೆಲವು ಕಡೆ ಅವುಗಳ ಮೇಲೆ ಶೆಡ್ ನಿರ್ಮಿಸಿ ಶಾಶ್ವತವಾಗಿ ವಿಶ್ರಾಂತಿ ಕಲ್ಪಿಸಲಾಗಿದೆ.
ಜಿಲ್ಲೆಯ ಇಂತಹ ಭಾಗದಲ್ಲಿ ಇಷ್ಟೇ ಮಳೆಯಾಗಿದೆ ಎಂಬುದನ್ನು ಅತ್ಯಾಧುನಿಕ ತಂತ್ರಜ್ಞಾನದ ಮಾಪನದ ಮೂಲಕ ತಿಳಿಯುವ ಸಲುವಾಗಿ ಗ್ರಾಮೀಣ ಭಾಗದಲ್ಲೂ ಮಳೆ ಮಾನ ಕೇಂದ್ರಗಳನ್ನು ಅಳವಡಿಸಲಾಗಿದೆ. ಸಂಪೂರ್ಣ ಗಣಕೀಕೃತ ವ್ಯವಸ್ಥೆಯ ಈ ಕೇಂದ್ರಗಳು ಉಪಗ್ರಹದ ಸಹಾಯದಿಂದ ಕ್ಷಣಾರ್ಧದಲ್ಲಿ ಆಯಾ ಗ್ರಾಪಂ ವ್ಯಾಪ್ತಿಯ ಮಳೆಯ ಪ್ರಮಾಣವನ್ನು ರವಾನೆ ಮಾಡುತ್ತಿದ್ದವು. ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಮಾತ್ರ ಮಳೆ ಮಾಪನ ಕೇಂದ್ರಗಳಿದ್ದ ಸಂದರ್ಭದಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಬಿದ್ದ ಮಳೆಯ ಪ್ರಮಾಣ ತಿಳಿಯಲು ಕಷ್ಟವಾಗುತ್ತಿತ್ತು. ಹೀಗಾಗಿ ಜಿಲ್ಲೆಯ ಮಳೆಯ ಪ್ರಮಾಣವನ್ನು ಸರಾಸರಿ ಅಂದಾಜು ಮಾಡಲಾಗುತ್ತಿತ್ತು. ಪ್ರಮಾಣದ ಆಧಾರದ ಮೇಲೆ ಜಿಲ್ಲೆಯಲ್ಲಾದ ಮಳೆಯನ್ನು ಪರಿಗಣಿಸಲಾಗುತ್ತಿತ್ತು. ಈಗ ಗ್ರಾ.ಪಂ ಮಟ್ಟದಲ್ಲಿ ಅಳವಡಿಸಿರುವುದರಿಂದ ಆ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎಂಬುದನ್ನು ಅರಿಯಬಹುದಾಗಿದೆ.
ಈಗ ಗ್ರಾಪಂಗಳ ಹಂತದಲ್ಲಿರುವ ಮಾಪನ ಕೇಂದ್ರಗಳಲ್ಲಿನ ಲೋಪದಿಂದಾಗಿ ಒಟ್ಟಾರೆ ದತ್ತಾಂಶದಲ್ಲೇ ಲೋಪವಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮಳೆ ಮಾಪನ ಕೇಂದ್ರಗಳು ಕಾರ್ಯ ನಿರ್ವಹಿಸದೇ ಇರುವುದರಿಂದ ಮಳೆಯ ಪ್ರಮಾಣವನ್ನು ಯಾವ ಮಾನದಂಡದಲ್ಲಿ ಪರಿಗಣಿಸುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
ಈ ಬಗ್ಗೆ ಕಳೆದ ವರ್ಷ ಕೆಡಿಪಿ ಸಭೆಯಲ್ಲಿಯೂ ಸಹ ವ್ಯಾಪಕ ಚರ್ಚೆ ನಡೆದಿತ್ತು. ಮಳೆ ಮಾಪನ ಕೇಂದ್ರಗಳು ಕಾರ್ಯ ನಿರ್ವಹಿಸದೇ ಇದ್ದರೆ ಅತಿವೃಷ್ಟಿ ಅನಾವೃಷ್ಟಿಯನ್ನು ಹೇಗೆ ನಿರ್ಧರಿಸುತ್ತೀರಿ ರೈತರಿಗೆ ಯಾವ ರೀತಿ ಪರಿಹಾರ ಕೊಡಲು ಸಾಧ್ಯ ಎಂದು ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ದ ಮುಗಿಬಿದ್ದಿದ್ದರು. ಕೂಡಲೇ ಜಿಲ್ಲೆಯ 280 ಮಳೆ ಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡುವಂತೆ ಮತ್ತು ಅವುಗಳ ಮೇಲೆ ಹಾಕಿರುವ ಶೆಡ್‌ಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಆದರೂ ಇದುವರೆಗೂ ಮಳೆ ಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡುವಂತಹ ಕಾರ್ಯ ಶೇ.100ರಷ್ಟು ಪೂರ್ಣಗೊಂಡಿಲ್ಲ.
ಮಳೆ ಮಾಪನ ಕೇಂದ್ರಗಳನ್ನು ದುರಸ್ಥಿ ಮಾಡಿ ಎಂದು ಇತ್ತೀಚಿನವರೆಗೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಅಲ್ಲದೇ ತಹಶೀಲ್ದಾರ್‌ವೋರ್ವರು ಖುದ್ದು ಭೇಟಿ ಮಳೆ ಮಾಪನ ದುರಸ್ಥಿಕಾರ್ಯ ಮಾಡಿಸಿದ ನಿದರ್ಶನವೂ ಇದೆ. ಆದರೆ ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರು ಎಂಬಂತೆ ಕಳೆದವರ್ಷವೇ ಈ ಬಗ್ಗೆ ಸಾಕಷ್ಟು ಚರ್ಚೆ ಮತ್ತು ಒತ್ತಾಯ ಸೂಚನೆಗಳು ಬಂದಿದ್ದರೂ ಸಹ ದುರಸ್ಥಿ ಕಾರ್ಯ ಮಂದಗತಿಯಲ್ಲಿ ಸಾಗಿರುವುದು ಅಧಿಕಾರಿ ವರ್ಗದ ಆಡಳಿತ ವೈಖರಿಯನ್ನು ತೋರಿಸುತ್ತದೆ ಎಂಬ ಅಭಿಪ್ರಾಯ ರೈತ ಸಮುದಾಯದಲ್ಲಿ ಕೇಳಿಬರುತ್ತಿದೆ.
ಮಳೆಯ ಪ್ರಮಾಣದ ದತ್ತಾಂಶ ಸರಿಯಾಗಿ ದಾಖಲಾಗದೇ ಇದ್ದರೆ ಹವಾಮಾನ ಆಧಾರಿತ ಬೆಳೆವಿಮೆಗೆ ಕತ್ತರಿ ಬೀಳಲಿದೆ ಎಂಬ ಆತಂಕ ರೈತರದ್ದಾಗಿದೆ. ಪ್ರತಿ ವರ್ಷ ಬೆಳೆ ವಿಮೆ ಮಾಡಿಸುವ ರೈತರು ಪ್ರೀಮಿಯಂ ಪಾವತಿಸುತ್ತಾರೆ. ಹೆಚ್ಚು ಮಳೆ ಬಿದ್ದು ಬೆಳೆ ನಾಶವಾದರೂ ಮಾಪನ ಕೇಂದ್ರಗಳ ದುಸ್ಥಿತಿಯಿಂದ ಅದು ದಾಖಲಾಗುವುದಿಲ್ಲ. ಅಲ್ಲದೇ ಮಳೆ ಕೊರತೆಯಾಗಿ ಬೆಳೆ ಬಾರದಿದ್ದರೂ ಬೆಳೆ ವಿಮೆ ಕೈ ಸೇರುವುದಿಲ್ಲ. ಎಲ್ಲದಕ್ಕೂ ಮಳೆ ಮಾಪನ ಕೇಂದ್ರಗಳ ಕಾರ್ಯವೈಖರಿಯ ಮೇಲೆಯೇ ಅವಲಂಬಿತವಾಗಿದೆ ಎನ್ನುತ್ತಾರೆ ರೈತರು.
ನೈಸರ್ಗಿಕ ವಿಕೋಪಗಳ ಮುನ್ಸೂಚನೆ ಮತ್ತು ಅಧಿಕ ಮಳೆ, ಅನಾವೃಷ್ಟಿ ಇವುಗಳ ದತ್ತಾಂಶದಲ್ಲಿ ವ್ಯತ್ಯಾಸವಾದರೆ ಇದರಿಂದ ನೇರವಾಗಿ ರೈತರಿಗೆ ಅನಾನುಕೂಲವಾಗುತ್ತದೆ. ಹವಾಮಾನ ಆಧಾರಿತ ಬೆಳೆ ವಿಮೆ ಪಡೆಯಲು ಇದೇ ದತ್ತಾಂಶ ತೊಡಕನ್ನುಂಟು ಮಾಡುತ್ತಿದೆ. ಇದರಿಂದ ಅನುಕೂಲವಾಗುತ್ತಿರುವುದು ವಿಮೆ ಕಂಪನಿಗಳಿಗೆ ಎಂಬ ಆರೋಪ ಸಹ ರೈತ ವಲಯದಲ್ಲಿ ಕೇಳಿಬರುತ್ತಿದೆ.
ಈ ಬಾರಿ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಕೆಲವು ಕಡೆ ಮಳೆ ಬಂದರೆ ಇನ್ನೂ ಕೆಲವು ಕಡೆ ಮಳೆಯೇ ಇಲ್ಲ. ರೈತರು ಬೆಳೆ ವಿಮೆ ಮಾಡಿಸುತ್ತಿದ್ದು, ಏನೇ ಆದರೂ ಮಳೆ ಮಾಪನ ಕೇಂದ್ರಗಳು ನೀಡುವ ವರದಿಯ ಆಧಾರದ ಮೇಲೆಯೇ ರೈತರಿಗೆ ಪರಿಹಾರ ಸಿಗಬೇಕಾಗಿದೆ. ಆದ್ದರಿಂದ ಕೂಡಲೇ ಎಲ್ಲಾ ಮಾಪನ ಕೇಂದ್ರಗಳನ್ನು ದುರಸ್ಥಿಗೊಳಿಸಿ ಅವಕಾಶವಾದರೆ ಹೊಸದಾಗಿಯೂ ಕೂಡ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

“ಒಂದು ವರ್ಷದಿಂದ ನಾವುಗಳು ಒತ್ತಾಯಿಸುತ್ತಲೇ ಇದ್ದರೂ ಮಳೆ ಮಾಪನ ಕೇಂದ್ರಗಳ ದುರಸ್ಥಿ ಕಾರ್ಯ ಪೂರ್ಣಗೊಂಡಿಲ್ಲ. ಇದು ಸರ್ಕಾರದ ಆಡಳಿತದ ಕಾರ್ಯವೈಖರಿಯಾಗಿದೆ. ಮಳೆ ಈ ಬಾರಿ ಕೈಕೊಡುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಎಲ್ಲಾ ಮಾಪನ ಕೇಂದ್ರಗಳನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಹಾಗೂ ಬೆಳೆ ವಿಮೆಗೆ ಅರ್ಜಿ ಹಾಕಲು ದಿನಾಂಕವನ್ನು ವಿಸ್ತರಿಸಬೇಕು.”
— ಬಿ.ವೈ. ರಾಘವೇಂದ್ರ, ಸಂಸದ

“ಮಳೆ ಮಾಪನ ಕೇಂದ್ರಗಳು ಕಾರ್ಯ ನಿರ್ವಹಿಸದಿದ್ದರೆ ರೈತರಿಗೆ ಅನ್ಯಾಯವಾಗುತ್ತದೆ. ನೆರೆ ಹಾಗೂ ಬರ ಎರಡೂ ಕೂಡ ಇದರ ಮೇಲೆ ಅವಲಂಬಿತವಾಗಿದೆ. ಒಂದು ವರ್ಷದಿಂದ ನಾವು ಹೇಳುತ್ತಿದ್ದರೂ ಕೂಡ ಅಧಿಕಾರಿ ವರ್ಗ ಇನ್ನೂ ಶೇ.100ರಷ್ಟು ದುರಸ್ಥಿಕಾರ್ಯ ಕೈಗೊಂಡಿಲ್ಲ. ಕೂಡಲೇ ಎಲ್ಲವನ್ನೂ ಸರಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು.”
— ಹೆಚ್.ಆರ್. ಬಸವರಾಜಪ್ಪ

“ಜಿಲ್ಲೆಯಲ್ಲಿ ಒಟ್ಟು 280 ಮಳೆ ಮಾಪನ ಕೇಂದ್ರಗಳಿವೆ. 2026ರ ಜನವರಿ ಮಾಹೆಯ ವೇಳೆಗೆ 208 ಕೇಂದ್ರಗಳು ದುರಸ್ತಿಯಲ್ಲಿದ್ದು, 72 ಕೇಂದ್ರಗಳು ಸುಸ್ಥಿತಿಯಲ್ಲಿದ್ದವು. ಇವುಗಳಲ್ಲಿ ಈಗಾಗಲೇ 185 ಕೇಂದ್ರಗಳನ್ನು ಸರಿಪಡಿಸಲಾಗಿದೆ. ಉಳಿದವುಗಳನ್ನು ಮುಂದಿನ 15 ದಿನಗಳಲ್ಲಿ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು.”
— ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ
