ಉಡುಪಿ: ಜಿಲ್ಲೆಯ ಮುದರಂಗಡಿಯಲ್ಲಿ ಹಾಡಹಗಲೇ ಗುಂಡಿನ ಸದ್ದು ಮೊಳಗಿದೆ. ಕಾಂಗ್ರೆಸ್ ಮುಖಂಡ, ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಉದ್ಯಮಿ ಪ್ರಿನ್ಸ್ ಪಾಯಿಂಟ್ ಡೇವಿಡ್ ಡಿಸೋಜಾ (55) ಎಂಬುವವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದಿದ್ದಾರೆ.
ಮುದರಂಗಡಿ ಪೇಟೆಯಲ್ಲಿರುವ ಡೇವಿಡ್ ಅವರ ಕಚೇರಿಯ ಬಳಿ ಶುಕ್ರವಾರ ಮಧಾಹ್ನ ಶೂಟೌಟ್ ನಡೆದಿದೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿದ್ದಾರೆ.
ಒಂದು ಗುಂಡು ಹಣೆಗೆ ತಗುಲಿದ್ದರೆ, ಎರಡು ಗುಂಡುಗಳು ಕೈಗೆ ತಗುಲಿದೆ. ತೀವ್ರವಾಗಿ ಗಾಯಗೊಂಡಿದ್ದ ಡೇವಿಡ್ ಡಿಸೋಜ ಅವರು ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತದೇಹವನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಬಳಿಕ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಪಡುಬಿದ್ರೆ ಮತ್ತು ಶಿರ್ವ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಉಡುಪಿ ಎಸ್ಪಿ ಹರಿರಾಂ ಶಂಕರ್ ಸಹಿತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿಗಳ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ.
