ಭದ್ರಾವತಿ: ಅಡಿಕೆ ತೋಟದ ಸುತ್ತ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ಬೇಲಿಗೆ ಸಿಲುಕಿ ಸುಮಾರು ಮೂರು ವರ್ಷದ ಗಂಡು ಕರಡಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಮೃತದೇಹವನ್ನು ತೋಟದ ಕಾಲುವೆಯಲ್ಲಿ ಹೂತು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಭದ್ರಾವತಿ ತಾಲೂಕಿನ ಹೊಳೇಹೊನ್ನೂರು ಹೋಬಳಿಯ ಯಡೇಹಳ್ಳಿ ಗ್ರಾಮದ ಸರ್ವೇ ನಂಬರ್ 54ರ ಜಮೀನಿನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಜಮೀನಿನ ಮಾಲೀಕ ದೊಡ್ಡಸೀಗೆ ಗೋವಿಂದಪ್ಪ ಎಂಬಾತ ಅಡಿಕೆ ತೋಟದ ಬೇಲಿಗೆ ಅಕ್ರಮವಾಗಿ ನೇರ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಎಂದು ಆರೋಪಿಸಲಾಗಿದೆ.
ವಿದ್ಯುತ್ ಬೇಲಿಗೆ ಸಿಲುಕಿ ಕರಡಿ ಮೃತಪಟ್ಟ ಬಳಿಕ, ವಿಷಯ ಹೊರಬಾರದಂತೆ ಮಾಡಲು ಅದರ ಮೃತದೇಹವನ್ನು ತೋಟದಲ್ಲಿದ್ದ ಕಾಲುವೆಯಲ್ಲಿ ಹೂತು ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಮಾಹಿತಿ ತಿಳಿದು ಶಾಂತಿಸಾಗರ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮ ವಿದ್ಯುತ್ ಬೇಲಿ ಅಳವಡಿಕೆ ಹಾಗೂ ವನ್ಯಜೀವಿ ಸಾವಿನ ಕುರಿತು ಅರಣ್ಯ ಇಲಾಖೆ ತನಿಖೆ ಕೈಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಭದ್ರಾವತಿಯ 3ನೇ ಹೆಚ್ಚುವರಿ ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ವನ್ಯಜೀವಿಗಳ ಸಂಚಾರವಿರುವ ಪ್ರದೇಶಗಳಲ್ಲಿ ಜಮೀನುಗಳ ಸುತ್ತ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸುವುದು ಅತ್ಯಂತ ಅಪಾಯಕಾರಿ. ಇಂತಹ ಕ್ರಮಗಳಿಂದ ವನ್ಯಜೀವಿಗಳ ಜೀವಕ್ಕೆ ಅಪಾಯ ಉಂಟಾಗುವುದಲ್ಲದೆ, ಕಾನೂನುಬದ್ಧವಾಗಿಯೂ ಗಂಭೀರ ಅಪರಾಧವಾಗುತ್ತದೆ. ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.
