ಭದ್ರಾವತಿ: ದನದ ಕೊಟ್ಟಿಗೆಯಲ್ಲಿ ಮೂರು ಮುಳ್ಳುಹಂದಿಗಳ ಮೃತದೇಹಗಳು ಪತ್ತೆಯಾದ ಘಟನೆ ಭದ್ರಾವತಿ ತಾಲ್ಲೂಕಿನ ಸಾವೆಮರಡಿ ಕಾವಲ್ ಗ್ರಾಮದಲ್ಲಿ ನಡೆದಿದೆ.
ತರೀಕೆರೆ ವಲಯದ ಹುಣಸಘಟ್ಟ ಶಾಖಾ ವ್ಯಾಪ್ತಿಯ ಸಾವೆಮರಡಿ ಕಾವಲ್ ಗ್ರಾಮದ ಸುರೇಶ್ ಎಂಬುವವರ ಮನೆಯ ದನದ ಕೊಟ್ಟಿಗೆಯಲ್ಲಿ ಮುಳ್ಳುಹಂದಿಗಳ ಮೃತದೇಹಗಳಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.
ಮಾಹಿತಿ ಆಧರಿಸಿ ವಲಯ ಅರಣ್ಯಾಧಿಕಾರಿ ಹರೀಶ್ ಕೆ.ಆರ್. ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮನೆಯ ಮೇಲೆ ದಾಳಿ ನಡೆಸಿದರು. ಈ ವೇಳೆ ದನದ ಕೊಟ್ಟಿಗೆಯಲ್ಲಿ ಮೂರು ಮುಳ್ಳುಹಂದಿಗಳ ಮೃತದೇಹಗಳು ಪತ್ತೆಯಾಗಿವೆ.
ಅರಣ್ಯ ಅಧಿಕಾರಿಗಳು ಮೃತದೇಹಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಅರಣ್ಯ ಮೊಕದ್ದಮೆ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಉಮೇಶ್ ಕೆ., ಗಸ್ತು ಅರಣ್ಯ ಪಾಲಕರಾದ ಅನ್ನಪೂರ್ಣೇಶ್ವರಿ ಹೆಗ್ಗಡೆ ಹಾಗೂ ಸುನೀಲ್ ಪೂಜಾರಿ, ನೆಡುತೋಪು ಕಾವಲುಗಾರರಾದ ರಾಜು ಮತ್ತು ನಾಗರಾಜ ಉಪಸ್ಥಿತರಿದ್ದರು.
