ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಯ ಮೂಲಕ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿರುವ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಚಿತ್ರತಂಡದಿಂದ ಹೊಸ ಅಪ್‌ಡೇಟ್ ಹೊರಬಿದ್ದಿದೆ. ಮಹಾನ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪ್ರತೀತ್ ಅಕ್ಕಿ ನಿರ್ಮಿಸಿರುವ ಈ ಕಾಮಿಡಿ ಥ್ರಿಲ್ಲರ್ ಡ್ರಾಮಾ ಸಿನಿಮಾದ ‘ಕಳ್ಳೇ ಬೀಜ ಕಿತ್ತುಕೊಂಡ್ ಹೋದ್ಲು’ ಎಂಬ ಮಜವಾದ ಲಿರಿಕಲ್ ವಿಡಿಯೋ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಈ ಹಾಡಿಗೆ ಗಾಯಕ ದಿವ್ಯ ಕುಮಾರ್ ಧ್ವನಿಯಾಗಿದ್ದು, ರಾಘವೇಂದ್ರ ವಿ. ಅವರ ಆಕರ್ಷಕ ಸಂಗೀತ ಸಂಯೋಜನೆ ಕೇಳುಗರನ್ನು ಗುನುಗುವಂತೆ ಮಾಡಿದೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಅಭಿನಂದನ್ ದೇಶಪ್ರಿಯ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಭೂಷಣ್ ಅವರ ನೃತ್ಯ ನಿರ್ದೇಶನ ಮತ್ತು ಉಜ್ವಲ್ ಚಂದ್ರ ಅವರ ಸಂಕಲನ ಹಾಡಿನ ದೃಶ್ಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದು, ಯುವ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.
ಹೊಸತನ ಮತ್ತು ಪ್ರಯೋಗಶೀಲತೆಯೊಂದಿಗೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿರುವ ಈ ಚಿತ್ರತಂಡ ಈಗಾಗಲೇ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿದೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ ಮತ್ತು ಹೊನ್ನಾವರದ ನಯನಮನೋಹರ ತಾಣಗಳಲ್ಲಿ ವಿಷ್ಣು ಪ್ರಸಾದ್, ವಿಶ್ವ ಪಾಟೀಲ್ ಹಾಗೂ ವಿದ್ಯಾ ಕಿರಣ್ ಅವರ ಕ್ಯಾಮೆರಾ ಕಣ್ಣಿನಲ್ಲಿ ಸಿನಿಮಾ ಸೆರೆಯಾಗಿದೆ. ಚೇತನ್ ರಾವ್ ಅವರ ಹಿನ್ನೆಲೆ ಸಂಗೀತ ಹಾಗೂ ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದ್ದು, ಸದ್ಯ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

ಚಿತ್ರದಲ್ಲಿ ಯುವನ್ ಹಣಕೋಡ್ ಹಾಗೂ ಅರ್ಜುನ್ ವೇದಾಂತ ಜೊತೆಗೆ ರಕ್ಷಿತಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇವರೊಂದಿಗೆ ಹಿರಿಯ ನಟ ದತ್ತಣ್ಣ, ವಿಜಯ್ ಚಂಡೂರ್, ನವೀಂದ್ರ, ಅನಿಲ್ ಸಿದ್ದು, ನಾಗರಾಜ್ ಮೂರ್ತಿ, ಮಿಮಿಕ್ರಿ ಗೋಪಿ, ಮನ್‌ದೀಪ್ ರಾಯ್, ಪ್ರಶಾಂತ್ ವೈ.ಎನ್ ಮತ್ತು ವಿ. ರವಿ ಶಂಕರ್ ನಾಗ್ ಸೇರಿದಂತೆ ದೊಡ್ಡ ತಾರಾಗಣವೇ ಅಭಿನಯಿಸಿದೆ. ಎಲ್ಲಿಯ ಸೀತಾ? ಎಲ್ಲಿಯ ಕೃಷ್ಣ? ಆ ಮನೆಯ ಮರ್ಮವೇನು ಎಂಬ ಕುತೂಹಲವನ್ನು ಹುಟ್ಟುಹಾಕಿರುವ ಚಿತ್ರತಂಡ, ಶೀಘ್ರದಲ್ಲೇ ಸಿನಿಮಾವನ್ನು ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.
