ಜನ ನೋಟ
ಶಿವಮೊಗ್ಗ

ಈರುಳ್ಳಿ ಬೆಲೆ ಗಗನಕ್ಕೆ: ಗೌರಿ-ಗಣೇಶ ಹಬ್ಬದ ವೇಳೆ ಕೆಜಿಗೆ 100 ರೂ.ಗೆ ಏರಿಕೆ ಸಾಧ್ಯತೆ

ವರದಿ: ಸನತ್ ಶಿವಮೊಗ್ಗ 

 

ಶಿವಮೊಗ್ಗ: ಮುಂದಿನ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಬರುತ್ತಿವೆ. ಮುಂದಿನ ತಿಂಗಳ ಗೌರಿ-ಗಣೇಶ ಹಬ್ಬದ ವೇಳೆಗೆ ಈರುಳ್ಳಿ ಬೆಲೆ ಕೆಜಿಗೆ 100 ರೂಪಾಯಿಗೆ ತಲುಪುವ ಸಾಧ್ಯತೆ ಇದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 25ರಿಂದ 50 ರೂಪಾಯಿಗೆ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಸದ್ಯ ಸುಮಾರು 65 ರೂಪಾಯಿಗೆ ಮಾರಾಟವಾಗುತ್ತಿದೆ.

ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಅವು ನಿರೀಕ್ಷಿತ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ.

ಮಳೆ ಕೊರತೆಯಿಂದಾಗಿ ರಾಜ್ಯದ ಪ್ರಮುಖ ಈರುಳ್ಳಿ ಬೆಳೆಯುವ ಪ್ರದೇಶಗಳಿಂದ ಹೊಸ ಈರುಳ್ಳಿ ಮಾರುಕಟ್ಟೆಗೆ ಬರುವ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ಗೌರಿ-ಗಣೇಶ ಹಬ್ಬದ ವೇಳೆಗೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದರು.

ಮಹಾರಾಷ್ಟ್ರದ ವಿದರ್ಭ ಪ್ರದೇಶದ ಕೆಲವು ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಅಧಿಕ ಮಳೆಯಾಗಿರುವುದರಿಂದಲೂ ಇಳುವರಿ ಕುಸಿದಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಗದಗ, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ಈ ಮುಂಗಾರು ಅವಧಿಯಲ್ಲಿ ಮಳೆ ಕೊರತೆಯಿಂದಾಗಿ ರೈತರು ಸಾಮಾನ್ಯ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲು ಸಾಧ್ಯವಾಗಿಲ್ಲ.

ಈರುಳ್ಳಿ ಪ್ರಧಾನವಾಗಿ ಮಳೆಯನ್ನೇ ಅವಲಂಬಿಸಿರುವ ಬೆಳೆಯಾಗಿರುವುದರಿಂದ, ಮಳೆ ಕೊರತೆಯು ರೈತರಿಗೆ ಸಂಕಷ್ಟ ತಂದಿದೆ.

ಇದೇ ವೇಳೆ, ಡೀಸೆಲ್ ಬೆಲೆ ಏರಿಕೆಯಿಂದ ಅಕ್ಕಿ, ಸಕ್ಕರೆ, ಬೆಲ್ಲ, ಅಡುಗೆ ಎಣ್ಣೆ ಹಾಗೂ ಬೇಳೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಸಾಗಣೆ ವೆಚ್ಚ ಹೆಚ್ಚಾಗಿದೆ. ಇದರ ಪರಿಣಾಮ ರೆಸ್ಟೋರೆಂಟ್‌ಗಳಲ್ಲಿನ ಆಹಾರ ದರಗಳ ಮೇಲೂ ಪರಿಣಾಮ ಬೀರುತ್ತಿದೆ.

ಈರುಳ್ಳಿ ದೋಸೆ, ಪಾನಿಪುರಿ, ಮಸಾಲೆ ಪುರಿ ಸೇರಿದಂತೆ ಈರುಳ್ಳಿ ಬಳಸಿ ತಯಾರಿಸುವ ಜನಪ್ರಿಯ ಆಹಾರಗಳ ಬೆಲೆಯೂ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

Related posts

ಅಂಬ್ಲಿಗೋಳ ಜಲಾಶಯ ಭರ್ತಿ: ಸಾಂಪ್ರದಾಯಿಕವಾಗಿ ಬಾಗಿನ

JanaNota Editor

ಪಾಟ್ನಾ ಮೃಗಾಲಯದಿಂದ ತ್ಯಾವರೆಕೊಪ್ಪಕ್ಕೆ ಬರಲಿವೆ 8 ತೋಳ, 4 ಘರಿಯಾಲ್

JanaNota Editor

ಆ.25ರಂದು ಬೃಹತ್ ವಿಧಾನಸೌಧ ಚಲೋ: ರೈತ ಸಂಘ

JanaNota Editor