ಶಿವಮೊಗ್ಗ: ನಗರದ ತ್ಯಾವರೆಕೊಪ್ಪದಲ್ಲಿರುವ ಶಿವಮೊಗ್ಗ ಮೃಗಾಲಯ ಹಾಗೂ ಹುಲಿ-ಸಿಂಹ ಸಫಾರಿಗೆ ಹೊಸ ಅತಿಥಿಗಳ ಆಗಮನವಾಗಿದ್ದು, ಮೃಗಾಲಯದ ಜೀವವೈವಿಧ್ಯ ಮತ್ತಷ್ಟು ಶ್ರೀಮಂತವಾಗಿದೆ.
ಪಾಟ್ನಾದ ಸಂಜಯ್ ಗಾಂಧಿ ಜೈವಿಕ ಉದ್ಯಾನವನದಿಂದ ಪ್ರಾಣಿ ವಿನಿಮಯ ಯೋಜನೆಯಡಿ 8 ತೋಳಗಳು ಹಾಗೂ 4 ಘರಿಯಾಲ್‌ಗಳನ್ನು ಶಿವಮೊಗ್ಗಕ್ಕೆ ತರಲಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯೊಂದಿಗೆ ಈ ಪ್ರಾಣಿ ವಿನಿಮಯ ಪ್ರಕ್ರಿಯೆ ನಡೆದಿದ್ದು, ಇದರ ಭಾಗವಾಗಿ ಶಿವಮೊಗ್ಗ ಮೃಗಾಲಯದಿಂದ ಎರಡು ಗಂಡು ಕಾಡುಕೋಣಗಳನ್ನು ಪಟ್ನಾ ಮೃಗಾಲಯಕ್ಕೆ ನೀಡಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ಬಿ.ಎಂ. ತಿಳಿಸಿದ್ದಾರೆ.
ಮೂರು ವಾರಗಳ ಕಾಲ ವಿಶೇಷ ನಿಗಾ
ಪಾಟ್ನಾದಿಂದ ಬಂದ ತೋಳಗಳ ಪೈಕಿ ಐದು ತೋಳಗಳನ್ನು ಸುಮಾರು ಮೂರು ವಾರಗಳ ಕಾಲ ಪ್ರತ್ಯೇಕವಾಗಿ ಇರಿಸಿ ಅವುಗಳ ಆರೋಗ್ಯ, ವರ್ತನೆ ಹಾಗೂ ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯದ ಮೇಲೆ ವಿಶೇಷ ನಿಗಾ ವಹಿಸಲಾಗಿತ್ತು.
ಈ ಅವಧಿಯಲ್ಲಿ ತೋಳಗಳಿಗೆ ಅಗತ್ಯ ತರಬೇತಿ, ಆಹಾರ ಹಾಗೂ ಆರೈಕೆ ಒದಗಿಸಲಾಗಿದ್ದು, ಆರೋಗ್ಯ ಸ್ಥಿತಿ ಉತ್ತಮವಾಗಿರುವುದು ಖಚಿತವಾದ ಬಳಿಕ ಇದೀಗ ಪ್ರವಾಸಿಗರ ವೀಕ್ಷಣೆಗೆ ಪ್ರದರ್ಶನ ಆವರಣಕ್ಕೆ ಬಿಡಲಾಗಿದೆ.
ಹೊಸ ಪರಿಸರಕ್ಕೆ ಪ್ರಾಣಿಗಳು ಸುರಕ್ಷಿತವಾಗಿ ಹೊಂದಿಕೊಳ್ಳುವಂತೆ ಮೃಗಾಲಯದ ಸಿಬ್ಬಂದಿ ನಿರಂತರವಾಗಿ ಅವುಗಳ ಚಲನವಲನ ಹಾಗೂ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದ್ದಾರೆ.
37 ಪ್ರಾಣಿ ತಳಿಗಳಿಗೆ ಏರಿಕೆ
ಹೊಸ ಪ್ರಾಣಿಗಳ ಸೇರ್ಪಡೆಯೊಂದಿಗೆ ಶಿವಮೊಗ್ಗ ಮೃಗಾಲಯದಲ್ಲಿರುವ ಪ್ರಾಣಿ ತಳಿಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಇದರಿಂದ ಮೃಗಾಲಯದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಂತಾಗಿದೆ.
ಮೃಗಾಲಯದ ಜೀವವೈವಿಧ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ಶಿವಮೊಗ್ಗ ಮೃಗಾಲಯವನ್ನು ‘ಚಿಕ್ಕ ಮೃಗಾಲಯ’ ವಿಭಾಗದಿಂದ ‘ಮಧ್ಯಮ ಮೃಗಾಲಯ’ ವಿಭಾಗಕ್ಕೆ ಮೇಲ್ದರ್ಜೆಗೇರಿಸುವ ನಿರೀಕ್ಷೆಯೂ ವ್ಯಕ್ತವಾಗಿದೆ.
ಘರಿಯಾಲ್‌ಗಳಿಗೂ ಹೊಸ ಸೇರ್ಪಡೆ
ಪಾಟ್ನಾದಿಂದ ಆಗಮಿಸಿರುವ ನಾಲ್ಕು ಘರಿಯಾಲ್‌ಗಳು ಶಿವಮೊಗ್ಗ ಮೃಗಾಲಯದ ಜಲಚರ ಜೀವವೈವಿಧ್ಯಕ್ಕೆ ಹೊಸ ಸೇರ್ಪಡೆಯಾಗಿವೆ.
ಘರಿಯಾಲ್‌ಗಳು ಅಪರೂಪದ ಮೊಸಳೆ ಪ್ರಭೇದಗಳಲ್ಲಿ ಒಂದಾಗಿದ್ದು, ಅವುಗಳ ಸಂರಕ್ಷಣೆ ಹಾಗೂ ಸಂತಾನೋತ್ಪತ್ತಿಗೆ ಮೃಗಾಲಯಗಳಲ್ಲಿ ವಿಶೇಷ ಮಹತ್ವವಿದೆ. ಶಿವಮೊಗ್ಗಕ್ಕೆ ಹೊಸ ಘರಿಯಾಲ್‌ಗಳ ಆಗಮನವು ಮುಂದಿನ ದಿನಗಳಲ್ಲಿ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕಾರ್ಯಕ್ರಮಗಳಿಗೆ ಸಹಕಾರಿಯಾಗುವ ನಿರೀಕ್ಷೆಯಿದೆ.
