ಶಿವಮೊಗ್ಗ: ಕಳೆದ ಎರಡು ತಿಂಗಳ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಲಸದಿಂದ ವಂಚಿತರಾದ ಬಿಸಿಯೂಟ ತಯಾರಕರಿಗೂ ಇಡುಗಂಟು ಹಣ ನೀಡಬೇಕು. ಬಿಸಿಯೂಟ ತಯಾರಕರನ್ನು ‘ಸ್ಕೀಮ್ ವರ್ಕರ್ಸ್’ ಎಂದು ಕರೆಯುವ ಬದಲು ‘ಕಾರ್ಮಿಕರು’ ಎಂದು ಘೋಷಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿವೃತ್ತ ಬಿಸಿಯೂಟ ತಯಾರಕರಿಗೆ ಪ್ರಸ್ತುತ ನೀಡಲಾಗುತ್ತಿರುವ ₹40 ಸಾವಿರ ಇಡುಗಂಟು ಹಣವನ್ನು ₹2 ಲಕ್ಷಕ್ಕೆ ಹೆಚ್ಚಿಸಬೇಕು. ಮೊಟ್ಟೆ ಸುಲಿಸಲು ನೀಡುತ್ತಿರುವ ₹1 ಭತ್ಯೆಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ.
ಮೊಟ್ಟೆ ಸುಲಿಸಿದ ಹಣವನ್ನು ಶಾಲೆಯ ಮುಖ್ಯ ಅಡುಗೆಯವರ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಎಲ್ಲ ಅಡುಗೆಯವರಿಗೂ ಸಮಾನವಾಗಿ ಹಂಚಿಕೆ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. 100 ವಿದ್ಯಾರ್ಥಿಗಳವರೆಗೆ ಇರುವ ಶಾಲೆಗಳಲ್ಲೂ ಮೂವರು ಅಡುಗೆಯವರನ್ನು ಕಡ್ಡಾಯವಾಗಿ ನೇಮಿಸಬೇಕು ಎಂದು ಮನವಿ ಮಾಡಲಾಗಿದೆ.
ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಗೌರವಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಬಿಸಿಯೂಟ ತಯಾರಕರಿಗೆ ₹10 ಲಕ್ಷ ಮರಣ ಪರಿಹಾರ ಜಾರಿಗೊಳಿಸಬೇಕು ಹಾಗೂ ಶಾಲೆಗಳಲ್ಲಿ ಸಂಭವಿಸುವ ಅಪಘಾತಗಳಿಗೆ ₹1 ಲಕ್ಷದವರೆಗೆ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಲಾಗಿದೆ.
ಸರ್ಕಾರ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದರೂ ಪ್ರಸ್ತುತ ಬಿಸಿಯೂಟ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ಬಿಡುಗಡೆಗೊಳಿಸಬಾರದು. ಎಲ್ಲರಿಗೂ ಉದ್ಯೋಗ ಭದ್ರತೆ ಕಲ್ಪಿಸಬೇಕು. ಬಿಸಿಯೂಟ ತಯಾರಕರಿಗಾಗಿ ಕಲ್ಯಾಣ ಮಂಡಳಿ ರಚಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಜಿ. ಅಕ್ಕಮ್ಮ, ಪ್ರಮುಖರಾದ ಹನುಮಂತಪ್ಪ, ಶಾರದಾ, ರೇಣುಕಾ, ಅನಿತಾ, ಮೀನಾಕ್ಷಮ್ಮ, ನಿರ್ಮಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
