ತುಮಕೂರು: ಆಷಾಢ ಮಾಸಕ್ಕೆ ತವರು ಮನೆಗೆ ತೆರಳಿದ್ದ ಪತ್ನಿ ವಾಪಸ್ ಮನೆಗೆ ಬರದ ಹಿನ್ನೆಲೆಯಲ್ಲಿ ಮನನೊಂದು ಪತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕುಣಿಗಲ್ ಪಟ್ಟಣದ ಮಹಾವೀರ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು 28 ವರ್ಷದ ಅವಿನಾಶ್ ಎಂದು ಗುರುತಿಸಲಾಗಿದೆ.
ಸುಮಾರು ಆರು ತಿಂಗಳ ಹಿಂದಷ್ಟೇ ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಯುವತಿಯನ್ನು ಅವಿನಾಶ್ ಪ್ರೀತಿಸಿ ವಿವಾಹವಾಗಿದ್ದ ಎನ್ನಲಾಗಿದೆ.
ಆಷಾಢ ಮಾಸದ ಹಿನ್ನೆಲೆಯಲ್ಲಿ ಅವಿನಾಶ್ ಅವರ ಪತ್ನಿ ತವರು ಮನೆಗೆ ತೆರಳಿದ್ದರು. ಬಳಿಕ ಪತ್ನಿಗೆ ಕರೆ ಮಾಡಿ ಮನೆಗೆ ವಾಪಸ್ ಬರುವಂತೆ ಅವಿನಾಶ್ ತಿಳಿಸಿದ್ದರು. ಆದರೆ ಪತ್ನಿ ತಾನು ಈಗ ವಾಪಸ್ ಬರುವುದಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ.
ಪತ್ನಿ ಮನೆಗೆ ಬಾರದಿದ್ದಕ್ಕೆ ಮನನೊಂದು ಕೃತ್ಯ
ಪತ್ನಿ ಮನೆಗೆ ವಾಪಸ್ ಬರದ ವಿಚಾರದಿಂದ ಅವಿನಾಶ್ ತೀವ್ರವಾಗಿ ಮನನೊಂದಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದು ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
