ದುಬೈ: ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಯುಎಇಗೆ ಸೇರಿದ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಸಂಯುಕ್ತ ಅರಬ್ ಒಕ್ಕೂಟ (ಯುಎಇ) ಶನಿವಾರ ಆರೋಪಿಸಿದೆ.
ಸರ್ಕಾರಿ ಸ್ವಾಮ್ಯದ ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ (ADNOC)ಗೆ ಸೇರಿದ ಹಡಗಿನ ಮೇಲೆ ಶುಕ್ರವಾರ ಸಂಜೆ ದಾಳಿ ನಡೆದಿದೆ ಎಂದು ಯುಎಇ ತಿಳಿಸಿದೆ.
ಹೊರ್ಮುಜ್ ಜಲಸಂಧಿಯಲ್ಲಿ ತನ್ನ ಹಡಗುಗಳ ಸುರಕ್ಷಿತ ಸಂಚಾರದ ಹಕ್ಕನ್ನು ಯುಎಇ ರಕ್ಷಿಸಿಕೊಳ್ಳಲಿದೆ ಎಂದು ಯುಎಇ ಅಧ್ಯಕ್ಷರ ಸಲಹೆಗಾರ ಅನ್ವರ್ ಗರ್ಗಶ್ ಹೇಳಿದ್ದಾರೆ.
“ರಕ್ಷಣೆ, ರಾಜತಾಂತ್ರಿಕತೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಬದ್ಧತೆಗಳನ್ನು ಆಧಾರವಾಗಿಟ್ಟುಕೊಂಡು ಯುಎಇ ಸಮತೋಲಿತ ಮತ್ತು ವಿವೇಕಯುತ ನೀತಿಯನ್ನು ಅನುಸರಿಸುತ್ತಿದೆ. ಇಂತಹ ದಾಳಿಗಳಿಂದ ದೇಶವನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ADNOCಗೆ ಸೇರಿದ ಎರಡು ಹಡಗುಗಳ ಮೇಲೂ ಇರಾನ್ ದಾಳಿ ನಡೆಸಿದೆ ಎಂದು ಯುಎಇ ಆರೋಪಿಸಿತ್ತು.
ಹೊರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ದಾಳಿಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳ ವ್ಯಕ್ತವಾಗಿದೆ.
