ಜನ ನೋಟ
ರಾಜ್ಯ

ಮಂಗಳೂರು–ಶೃಂಗೇರಿ–ಶಿವಮೊಗ್ಗ ಹೊಸ ರೈಲು ಮಾರ್ಗ!

ವರದಿ: ಸನತ್ ಶಿವಮೊಗ್ಗ

ಮಂಗಳೂರು–ಶೃಂಗೇರಿ–ಶಿವಮೊಗ್ಗ ನಡುವೆ ಪ್ರಸ್ತಾವಿತ 332 ಕಿ.ಮೀ. ಉದ್ದದ ಹೊಸ ರೈಲು ಮಾರ್ಗದ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸುವುದಕ್ಕಾಗಿ ಕ್ಷೇತ್ರ ಸ್ಥಳ ಸಮೀಕ್ಷೆಗೆ (Field Location Survey-FLS) ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಈ ಕುರಿತು , ಮಂಗಳೂರು ರೈಲ್ವೆ ಸಂಪರ್ಕ ಸಾಮರ್ಥ್ಯ ವೃದ್ಧಿ ಕುರಿತು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಪ್ರತಿಯಾಗಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ರೈಲ್ವೆ ಸಚಿವಾಲಯ 18 ಪುಟಗಳ ವಿವರವಾದ ಹೇಳಿಕೆಯನ್ನು ಸದನದ ಮುಂದೆ ಮಂಡಿಸಿದೆ. ಈ ಉತ್ತರದಲ್ಲಿ ಮಂಗಳೂರು ಪ್ರದೇಶದ ರೈಲ್ವೆ ಜಾಲವನ್ನು ಬಲಪಡಿಸಲು ಮೂರು ಪ್ರಮುಖ ಯೋಜನೆಗಳ ಸಮೀಕ್ಷೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಲಾಗಿದೆ. ಈ ಪೈಕಿ ಮಂಗಳೂರು–ಶೃಂಗೇರಿ–ಶಿವಮೊಗ್ಗ 332 ಕಿ.ಮೀ. ಹೊಸ ರೈಲು ಮಾರ್ಗವೂ ಒಂದಾಗಿದೆ. ಈ ಮಾರ್ಗದ ಡಿಪಿಆರ್ ಸಿದ್ಧಪಡಿಸಲು ಅಗತ್ಯವಿರುವ FLSಗೆ ಅನುಮೋದನೆ ದೊರೆತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, 332 ಕಿ.ಮೀ. ಹೊಸ ರೈಲು ಮಾರ್ಗದ ನಿರ್ಮಾಣ ಯೋಜನೆಗೆ ಅಂತಿಮ ಅನುಮೋದನೆ ದೊರೆತಿಲ್ಲ. ಸದ್ಯ ದೊರೆತಿರುವುದು ಡಿಪಿಆರ್ ಸಿದ್ಧಪಡಿಸಲು ನಡೆಸಬೇಕಾದ ಕ್ಷೇತ್ರ ಸ್ಥಳ ಸಮೀಕ್ಷೆಗೆ ಅನುಮೋದನೆ ಮಾತ್ರ. ಸಮೀಕ್ಷೆ ನಂತರ ಮಾರ್ಗದ ತಾಂತ್ರಿಕ ಸಾಧ್ಯತೆ, ಅಗತ್ಯ ಮೂಲಸೌಕರ್ಯ, ಯೋಜನೆಯ ಆರ್ಥಿಕ ಸಾಧ್ಯತೆ ಸೇರಿದಂತೆ ವಿವಿಧ ಅಂಶಗಳ ಆಧಾರದಲ್ಲಿ ಡಿಪಿಆರ್ ಅಂತಿಮಗೊಳ್ಳಲಿದೆ.

ಡಿಪಿಆರ್ ಸಿದ್ಧವಾದ ನಂತರವೇ ಯೋಜನೆಯ ಅನುಮೋದನೆಗೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆ ನಡೆಯಲಿವೆ. ಡಿಪಿಆರ್ ಅಂತಿಮಗೊಂಡ ಬಳಿಕ ರಾಜ್ಯ ಸರ್ಕಾರ ಸೇರಿದಂತೆ ವಿವಿಧ ಸಂಬಂಧಿತ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಯುತ್ತದೆ. ನಂತರ ನೀತಿ ಆಯೋಗದ ಮೌಲ್ಯಮಾಪನ, ಕೇಂದ್ರ ಹಣಕಾಸು ಸಚಿವಾಲಯ ಸೇರಿದಂತೆ ಸಂಬಂಧಿತ ಸಂಸ್ಥೆಗಳ ಅಗತ್ಯ ಅನುಮೋದನೆ ಪಡೆಯಬೇಕಾಗುತ್ತದೆ.

ಪ್ರಸ್ತುತ ಹಂತದಲ್ಲಿ ಮಂಗಳೂರು–ಶೃಂಗೇರಿ–ಶಿವಮೊಗ್ಗ ರೈಲು ಮಾರ್ಗಕ್ಕೆ ಯಾವಾಗ ಅಂತಿಮ ಅನುಮೋದನೆ ದೊರೆಯಲಿದೆ ಅಥವಾ ಕಾಮಗಾರಿ ಯಾವಾಗ ಆರಂಭವಾಗಲಿದೆ ಎಂಬ ನಿಗದಿತ ಕಾಲಮಿತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿಲ್ಲ. ಅದೇ ರೀತಿ, ಈ 332 ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಎಷ್ಟು ವೆಚ್ಚವಾಗಲಿದೆ, ಎಷ್ಟು ಭೂಮಿ ಅಗತ್ಯವಿದೆ, ಯಾವ ಊರುಗಳ ಮೂಲಕ ಮಾರ್ಗ ಹಾದುಹೋಗಲಿದೆ, ಎಷ್ಟು ನಿಲ್ದಾಣಗಳು ಬರಲಿವೆ, ಪ್ರಯಾಣಿಕರ ಸಂಖ್ಯೆಯ ಅಂದಾಜು ಎಷ್ಟು, ಸರಕು ಸಾಗಣೆ ಸಾಧ್ಯತೆ ಎಷ್ಟಿದೆ ಹಾಗೂ ಕಾಮಗಾರಿ ಪೂರ್ಣಗೊಳಿಸುವ ಗುರಿ ಯಾವುದು ಎಂಬೆಲ್ಲಾ ಮಾಹಿತಿ ಭವಿಷ್ಯದಲ್ಲಿ ನಿಕ್ಕಿಯಾಗಬೇಕಿದೆ.

ರಾಜ್ಯದಲ್ಲಿ ಈಗಾಗಲೇ ನಡೆಯುತ್ತಿರುವ ರೈಲ್ವೆ ಯೋಜನೆಗಳ ಪೈಕಿ ಶಿವಮೊಗ್ಗ–ರಾಣೆಬೆನ್ನೂರು 96 ಕಿ.ಮೀ. ಹೊಸ ರೈಲು ಮಾರ್ಗವೂ ಸೇರಿದ್ದು, ಅದರ ಅಂದಾಜು ವೆಚ್ಚ ₹994 ಕೋಟಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಯೋಜನೆಗೆ ಒಟ್ಟು 559 ಹೆಕ್ಟೇರ್ ಭೂಮಿ ಅಗತ್ಯವಿದ್ದು, 283 ಹೆಕ್ಟೇರ್ ಸ್ವಾಧೀನಗೊಂಡಿದೆ ಹಾಗೂ ಇನ್ನೂ 276 ಹೆಕ್ಟೇರ್ ಭೂಮಿ ಸ್ವಾಧೀನವಾಗಬೇಕಿದೆ. ಶಿವಮೊಗ್ಗ–ಹರಿಹರ 79 ಕಿ.ಮೀ. ಹೊಸ ಮಾರ್ಗಕ್ಕೆ ಅಗತ್ಯವಿರುವ 488 ಹೆಕ್ಟೇರ್ ಭೂಮಿಯಲ್ಲಿ ಭೂಸ್ವಾಧೀನ ಇನ್ನೂ ಆಗಿಲ್ಲ ಎಂಬ ಮಾಹಿತಿಯನ್ನೂ ಉತ್ತರ ಒಳಗೊಂಡಿದೆ.

Related posts

ಶಿವಮೊಗ್ಗ ಗ್ರಾಮಾಂತರದ ಕೆರೆಗಳಿಗೆ ಕೊಳವೆ ಮಾರ್ಗದ ಮೂಲಕ ನೀರು : ₹22.42 ಕೋಟಿ ಯೋಜನೆಗೆ ತುರ್ತು ಅನುಮೋದನೆಗೆ ಮನವಿ

JanaNota Editor

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಾಫಿ ಸಾಕ್ಷಿಯಾಗಲು ಎ-14 ಪ್ರದೋಷ್ ಅರ್ಜಿ : ನಟ ದರ್ಶನ್‌ಗೆ ಹೆಚ್ಚಿದ ಸಂಕಷ್ಟ..!

JanaNota Editor

ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ: ಮಧು ಬಂಗಾರಪ್ಪ

JanaNota Editor