ಮಹಾರಾಷ್ಟ್ರ : ಪಾಲ್ಘರ್ ಜಿಲ್ಲೆಯಲ್ಲಿ ನಡೆದ ಜನ್ಮದಿನದ ಆಚರಣೆಯೊಂದು ಇದೀಗ ವೈದ್ಯಕೀಯ ತುರ್ತುಪರಿಸ್ಥಿತಿಗೆ ತಿರುಗಿದ್ದು, ಕೇಕ್ ತಿಂದ ತಕ್ಷಣವೇ 11 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಕೇಕ್ ಒಳಗೆ ಸತ್ತ ಹಲ್ಲಿ ಪತ್ತೆಯಾಗಿದೆ ಎಂದು ಸಂತ್ರಸ್ತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಈ ಆಘಾತಕಾರಿ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA), ಕೇಕ್ ಖರೀದಿಸಲಾಗಿದ್ದ ಚಾಮುಂಡಾ ಬೇಕರಿಯ ಮೇಲೆ ದಿಢೀರ್ ದಾಳಿ ನಡೆಸಿ ಅದರ ಪರವಾನಗಿಯನ್ನು ರದ್ದುಗೊಳಿಸಿದೆ.
ನಾಲಾಸೋಪರಾ (ಪೂರ್ವ) ಪ್ರದೇಶದ ಟಾಕಿಪಾಡಾದ ನೀಲಕಂಠೇಶ್ವರದಲ್ಲಿ ಶನಿವಾರ ಸಂಜೆ 25 ವರ್ಷದ ಮಹಿಳೆಯ ಹುಟ್ಟುಹಬ್ಬವನ್ನು ಆಚರಿಸಲು ಸ್ಥಳೀಯರು ಸೇರಿದ್ದಾಗ ಈ ಅವಘಡ ಸಂಭವಿಸಿದೆ. ಅಸ್ವಸ್ಥರಾದ 11 ಜನರಲ್ಲಿ ಏಳು ಮಕ್ಕಳಿದ್ದು, ಅವರಲ್ಲಿ ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಹಾಗೂ ಅವರನ್ನು ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂಜೆ 6 ಗಂಟೆಯ ಸುಮಾರಿಗೆ ಮಕ್ಕಳು ತಂದಿದ್ದ ಕೇಕ್ ತಿಂದ ಕೆಲವೇ ನಿಮಿಷಗಳಲ್ಲಿ ಅವರಿಗೆ ಎದೆಯಲ್ಲಿ ಉರಿಯುವಂತಹ ಅನುಭವ, ವಿಪರೀತ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ತಕ್ಷಣವೇ ಎಲ್ಲರನ್ನೂ ಸಮೀಪದ ಮುನ್ಸಿಪಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೇಕ್‌ನಲ್ಲಿ ಸತ್ತ ಹಲ್ಲಿ ಇರುವುದನ್ನು ತಾವೇ ನೋಡಿದ್ದಾಗಿ ಮಕ್ಕಳು ವೈದ್ಯರಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ. ತುಳಿಂಜ್ ಠಾಣೆಯ ಪೊಲೀಸರ ತಂಡವು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೇಕ್‌ನ ಮಾದರಿಗಳನ್ನು ವಶಪಡಿಸಿಕೊಂಡು ಪ್ರಯೋಗಾಲಯದ ಪರೀಕ್ಷೆಗಾಗಿ ಕಳುಹಿಸಿದೆ.
ಆಹಾರ ವಿಷಬಾಧೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ಸಂಬಂಧಪಟ್ಟ ಬೇಕರಿಯ ಸಂಪೂರ್ಣ ಪರಿಶೀಲನೆ ನಡೆಸುವಂತೆ ಎಫ್‌ಡಿಎ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಸಾಯಿ-ವಿರಾರ್ ವಲಯದ ಮೇಯರ್ ಅಜೀವ್ ಪಾಟೀಲ್ ಅವರು ಪ್ರತಿಕ್ರಿಯಿಸಿದ್ದಾರೆ.
