ಶಿವಮೊಗ್ಗ: ಸಂಕಲ್ಪ ಶಿವಮೊಗ್ಗ ವತಿಯಿಂದ ಆಗಸ್ಟ್ 14ರಂದು ನಗರದ ಸೀನಪ್ಪಶೆಟ್ಟಿ ಸರ್ಕಲ್ (ಗೋಪಿಸರ್ಕಲ್)ನಲ್ಲಿ ಸ್ವದೇಶಿ ಮಂತ್ರ-2026 ಹೆಸರಿನಲ್ಲಿ ಸ್ವಾತಂತ್ರ್ಯಗೀತೆಗಳ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾತ್ರಿ 9 ಗಂಟೆಗೆ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ರಾತ್ರಿ 9.30ರಿಂದ 10ರವರೆಗೆ ವಿಶೇಷ ದೇಶಭಕ್ತಿ ಗೀತೆಗಳ ಗಾಯನ ನಡೆಯಲಿದ್ದು, 10ರಿಂದ 10.30ರವರೆಗೆ 10 ಯೋಧರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಳಿಕ ದೇಶಭಕ್ತಿ ಗೀತೆಗಳಿಗೆ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 12 ಗಂಟೆಗೆ ಸ್ವಾತಂತ್ರ್ಯ ಸಂಭ್ರಮಾಚರಣೆ, ಸಿಹಿ ವಿತರಣೆ ಹಾಗೂ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದರು.

ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ 35ಕ್ಕೂ ಅಧಿಕ ಸಂಘ-ಸಂಸ್ಥೆಗಳು ಸಹಕಾರ ನೀಡಿವೆ. ಸುಮಾರು 3 ಗಂಟೆಗಳ ಕಾಲ ವಿನೂತನ ಕಾರ್ಯಕ್ರಮ ನಡೆಯಲಿದ್ದು, ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ವೇದಿಕೆ ಕಾರ್ಯಕ್ರಮ ಅಥವಾ ಭಾಷಣಗಳಿಗೆ ಅವಕಾಶವಿರುವುದಿಲ್ಲ. ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಕಾರ್ಗಿಲ್ ಯುದ್ಧ ಪ್ರದೇಶದಲ್ಲಿ ಅತಿ ಹೆಚ್ಚು ಬಾರಿ ಸೇವೆ ಸಲ್ಲಿಸಿದ ಶಿವಮೊಗ್ಗದ ಯೋಧ ಸುಭಾಷ್‌ಚಂದ್ರ ತೇಜಸ್ವಿ ಉದ್ಘಾಟಿಸಲಿದ್ದಾರೆ. ಸುಮಾರು 250 ಕಲಾವಿದರು ದೇಶಭಕ್ತಿ ಗೀತೆಗಳು ಹಾಗೂ ರಾಷ್ಟ್ರಗೀತೆಗೆ ಧ್ವನಿಯಾಗಲಿದ್ದು, 100ಕ್ಕೂ ಹೆಚ್ಚು ಕಲಾವಿದರು ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸುವವರು ಬಿಳಿ ಉಡುಪಿನಲ್ಲಿ ಬರಬೇಕು. ಮಳೆಯಾದರೂ ಕಾರ್ಯಕ್ರಮ ಮುಂದುವರಿಯಲಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಛತ್ರಿ, ಕ್ಯಾಪ್ ಹಾಗೂ ರೈನ್‌ಕೋಟ್‌ಗಳನ್ನು ತರಬಹುದು ಎಂದು ಸಿ.ಎಸ್.ಷಡಾಕ್ಷರಿ ಮನವಿ ಮಾಡಿದರು.
“ರಾತ್ರಿ 9 ಗಂಟೆಗೆ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, 12 ಗಂಟೆಗೆ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳ್ಳಲಿದೆ. 10 ಜನ ಯೋಧರಿಗೆ ಸನ್ಮಾನ ಹಾಗೂ 250 ಕಲಾವಿದರಿಂದ ದೇಶಭಕ್ತಿ ಗೀತೆಗಳ ಗಾಯನ ಮತ್ತು ನೃತ್ಯ ನಡೆಯಲಿದೆ. ಕಾರ್ಯಕ್ರಮಕ್ಕೆ ಬರುವವರು ಬಿಳಿ ಉಡುಪಿನೊಂದಿಗೆ ಆಗಮಿಸಬೇಕು. ಮಳೆ ಬಂದರೂ ಕಾರ್ಯಕ್ರಮ ಮುಂದುವರಿಯಲಿದೆ.”
— ಸಿ.ಎಸ್.ಷಡಾಕ್ಷರಿ
ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಉದ್ಯಮಿಗಳು, ಕಾರ್ಮಿಕರು, ಸರ್ಕಾರಿ ನೌಕರರು, ವಿವಿಧ ಮಠಾಧೀಶರು, ಧರ್ಮಗುರುಗಳು ಹಾಗೂ ನಾಗರಿಕರು ಸ್ವಯಂಪ್ರೇರಣೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದೊಂದು ವಿನೂತನ ದೇಶಭಕ್ತಿ ಕಾರ್ಯಕ್ರಮವಾಗಿದೆ ಎಂದು ವಕೀಲ ಕೆ.ಪಿ.ಶ್ರೀಪಾಲ್ ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಯಾಂತ್ರೀಕೃತವಾಗಿ ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತವಾಗಿದೆ. ಆದರೆ ಸ್ವಾತಂತ್ರ್ಯ ದಿನಾಚರಣೆ ಪ್ರತಿಯೊಬ್ಬ ಭಾರತೀಯನೂ ಸಂಭ್ರಮಿಸುವ ಹಬ್ಬವಾಗಿದೆ. ಆದ್ದರಿಂದ ಸ್ವದೇಶಿ ಮಂತ್ರ-2026 ಕಾರ್ಯಕ್ರಮದ ಮೂಲಕ ಶಿವಮೊಗ್ಗ ನಗರದ ಪ್ರತಿಯೊಬ್ಬರೂ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಹೇಳಿದರು.
ಯುವ ಸಮೂಹ ದೇಶಭಕ್ತಿಯಿಂದ ವಿಮುಖವಾಗುತ್ತಿರುವ ಸಂದರ್ಭದಲ್ಲಿ ಅವರಲ್ಲಿ ದೇಶದ ಬಗ್ಗೆ ಅಭಿಮಾನ ಹಾಗೂ ರಾಷ್ಟ್ರಭಕ್ತಿ ಬೆಳೆಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ವದೇಶಿ ಮಂತ್ರ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಸತೀಶ್‌ಕುಮಾರ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಳ್ಳೇಕೆರೆ ಸಂತೋಷ್, ನೆಹರೂ ಕ್ರೀಡಾಂಗಣ ಗೆಳೆಯರ ಬಳಗದ ಮೋಹನ್ ಕುಮಾರ್, ಸಮನ್ವಯ ಕಾಶಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ವಸಂತ್ ಹೋಬಳಿದಾರ್, ಹೆಸರಾಂತ ಗಾಯಕಿ ಸುರೇಖಾ ಹೆಗ್ಡೆ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಮೋಹನ್ ಕುಮಾರ್, ಹರ್ಷಬೋವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
