ಜನ ನೋಟ
ಶಿವಮೊಗ್ಗ

ಆ. 13–14 ರಂದು ‘ಚುಂಚಾದ್ರಿ ಕಪ್–2026’ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

ಶಿವಮೊಗ್ಗ, ಆ. 4: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಾಗೂ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ), ಶಿವಮೊಗ್ಗ ಮತ್ತು ಜಿಲ್ಲಾ ವಾಲಿಬಾಲ್ ಸಂಸ್ಥೆ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ‘ಚುಂಚಾದ್ರಿ ಕಪ್–2026’ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಗಸ್ಟ್ 13 ಮತ್ತು 14ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ತಂಡಗಳಿಗಾಗಿ ನಡೆಯಲಿರುವ ಈ ಪಂದ್ಯಾವಳಿಗೆ ಪದ್ಮಭೂಷಣ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದವಿದ್ದು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಉಪಸ್ಥಿತಿ ವಹಿಸಲಿದ್ದು, ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು ಉಪಸ್ಥಿತರಿರುವರು.

ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ತಮ್ಮ ಬಾಲಕ ಹಾಗೂ ಬಾಲಕಿಯರ ತಂಡಗಳನ್ನು ಕಳುಹಿಸಿ ಚುಂಚಾದ್ರಿ ಕಪ್–2026 ಅನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳೊಂದಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಕಡ್ಡಾಯವಾಗಿ ಹಾಜರಿರಬೇಕು. ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಅಲ್ಲದೆ, ಶಾಲೆಯ ಪ್ರಾಂಶುಪಾಲರಿಂದ ದೃಢೀಕರಿಸಿದ ಪತ್ರವನ್ನು ತರಬೇತಿದಾರರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಸಲ್ಲಿಸಬೇಕಾಗಿದೆ.

ತಂಡಗಳ ನೋಂದಣಿಗಾಗಿ ನೀಡಿರುವ ಅರ್ಜಿಯಲ್ಲಿ ವಿದ್ಯಾರ್ಥಿಗಳ ವಿವರಗಳನ್ನು ಭರ್ತಿ ಮಾಡಿ, ಪ್ರಾಂಶುಪಾಲರ ದೃಢೀಕರಣದೊಂದಿಗೆ ಆಗಸ್ಟ್ 5ರೊಳಗೆ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶರಾವತಿ ನಗರ, ಶಿವಮೊಗ್ಗಕ್ಕೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರ ಧರಿಸಬೇಕು. ಸ್ಪರ್ಧಿಗಳಿಗೆ 17 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, 2010ರ ಜನವರಿ 1ರ ನಂತರ ಜನಿಸಿದವರಾಗಿರಬೇಕು. ಕಡ್ಡಾಯವಾಗಿ 18 ಕಾಲಂ ಹೊಂದಿರುವ ಗುರುತಿನ ಚೀಟಿ (ಇತ್ತೀಚಿನ ಭಾವಚಿತ್ರದೊಂದಿಗೆ), ಆಧಾರ್ ಗುರುತಿನ ಚೀಟಿ, SATS ಸಂಖ್ಯೆ ಹಾಗೂ ಶಾಲೆಯ DISE ಕೋಡ್ ಸಲ್ಲಿಸಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ 99458 33464, 89714 52532, 88844 83484 ಹಾಗೂ 63617 11504 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಂಶುಪಾಲೆ ಕುಮಾರಿ ದಿವ್ಯಾ ಕರಣಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಆ.23ರಂದು ಅಖಿಲ ಕರ್ನಾಟಕ ಮೂರನೇ ಗಜಲ್ ಸಮ್ಮೇಳನ

JanaNota Editor

ಕಳಂಕಿತರಿಗೆ ಮತ್ತೆ ಮಂತ್ರಿಗಿರಿ: ಶಾಸಕ ಚನ್ನಬಸಪ್ಪ ಆಕ್ರೋಶ

JanaNota Editor

ಹೊಳೆಹೊನ್ನೂರು : ಹೊಸ ಮಿಷನ್ ಟ್ರಯಲ್ ವೇಳೆ ದುರಂತ: ವಿದ್ಯುತ್ ಶಾಕ್‌ಗೆ ಪೇಂಟರ್ ಸಾವು

JanaNota Editor