ಜನ ನೋಟ
ಶಿವಮೊಗ್ಗ

ಪಿಎಂ ಸುರಕ್ಷಿತ್ ಮಾತೃತ್ವ ಅಭಿಯಾನದಿಂದ ಗರ್ಭಿಣಿಯರಿಗೆ ಉಚಿತ ಆರೈಕೆ

21,112 ಅಧಿಕ ಅಪಾಯದ ಗರ್ಭಧಾರಣೆ ಪತ್ತೆ: ಸಂದ ಬಿ.ವೈ. ರಾಘವೇಂದ್ರ

ನವದೆಹಲಿ, ಆ. 4: ಪ್ರಧಾನಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ (ಪಿಎಂಎಸ್‌ಎಂಎ) 2016ರಲ್ಲಿ ಆರಂಭವಾದ ಬಳಿಕ ದೇಶಾದ್ಯಂತ 7.91 ಕೋಟಿಗೂ ಹೆಚ್ಚು ಗರ್ಭಿಣಿಯರು ತಜ್ಞ ವೈದ್ಯರ ನೇತೃತ್ವದಲ್ಲಿ ಉಚಿತ ಹಾಗೂ ಗುಣಮಟ್ಟದ ಪ್ರಸವಪೂರ್ವ ಆರೈಕೆ ಪಡೆದಿದ್ದು, ಅವರಲ್ಲಿ 1.24 ಕೋಟಿಗೂ ಹೆಚ್ಚು ಅಧಿಕ ಅಪಾಯದ ಗರ್ಭಧಾರಣೆಗಳನ್ನು ಸಕಾಲದಲ್ಲೇ ಗುರುತಿಸಿ ಚಿಕಿತ್ಸೆ ಮತ್ತು ವೈದ್ಯಕೀಯ ಮೇಲ್ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಕುರಿತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು ಲಿಖಿತ ಉತ್ತರ ನೀಡಿದ್ದು, ದೇಶ, ರಾಜ್ಯ ಹಾಗೂ ಜಿಲ್ಲಾವಾರು ಯೋಜನೆಯ ಅನುಷ್ಠಾನದ ಮಾಹಿತಿಯನ್ನು ಸಂಸತ್ತಿಗೆ ಒದಗಿಸಿದ್ದಾರೆ.

ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 35,13,527 ಗರ್ಭಿಣಿಯರು ಪ್ರಧಾನಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನದಡಿ ಉಚಿತ ಪ್ರಸವಪೂರ್ವ ಆರೋಗ್ಯ ಸೇವೆ ಪಡೆದಿದ್ದಾರೆ. ರಾಜ್ಯದಲ್ಲಿ 12,28,200 ಅಧಿಕ ಅಪಾಯದ ಗರ್ಭಧಾರಣೆಗಳನ್ನು ಗುರುತಿಸಿ ವಿಶೇಷ ವೈದ್ಯಕೀಯ ಆರೈಕೆ, ಚಿಕಿತ್ಸೆಯ ಅನುಸರಣೆ ಹಾಗೂ ನಿರಂತರ ಮೇಲ್ವಿಚಾರಣೆಗೆ ಒಳಪಡಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಯೋಜನೆಯಡಿ 58,763 ಗರ್ಭಿಣಿಯರು ಪ್ರಸವಪೂರ್ವ ಆರೈಕೆಯ ಸೌಲಭ್ಯ ಪಡೆದಿದ್ದು, ಅವರಲ್ಲಿ 21,112 ಅಧಿಕ ಅಪಾಯದ ಗರ್ಭಧಾರಣೆಗಳನ್ನು ಸಕಾಲಿಕ ಚಿಕಿತ್ಸೆ ಹಾಗೂ ವಿಶೇಷ ಆರೈಕೆಗೆ ಗುರುತಿಸಲಾಗಿದೆ.

ದೇಶದಲ್ಲಿ ತಾಯಿ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದ್ದು, ತಾಯಿಯ ಮರಣ ಅನುಪಾತ (MMR) ಒಂದು ಲಕ್ಷ ಜೀವಂತ ಜನನಗಳಿಗೆ 130ರಿಂದ 87ಕ್ಕೆ ಇಳಿಕೆಯಾಗಿದೆ. ಅಲ್ಲದೆ, ಸಾಂಸ್ಥಿಕ ಹೆರಿಗೆಗಳ ಪ್ರಮಾಣ 90.6 ಶೇಕಡಾಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ವಿಸ್ತೃತ ಇ-ಪಿಎಂಎಸ್‌ಎಂಎ ಯೋಜನೆಯಡಿ ಗುರುತಿಸಲಾದ ಪ್ರತಿಯೊಂದು ಅಧಿಕ ಅಪಾಯದ ಗರ್ಭಧಾರಣೆಯನ್ನು ಹೆರಿಗೆಯ ನಂತರ 45 ದಿನಗಳವರೆಗೆ ಡಿಜಿಟಲ್ ವೇದಿಕೆಯ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸ್ವಯಂಚಾಲಿತ ಸಂದೇಶ ವ್ಯವಸ್ಥೆ, ಹೆಚ್ಚುವರಿ ಪ್ರಸವಪೂರ್ವ ತಪಾಸಣೆ, ಮೊದಲ ಉಲ್ಲೇಖ ಚಿಕಿತ್ಸಾ ಕೇಂದ್ರಗಳಿಗೆ ಸಂಪರ್ಕ, ಆಶಾ ಕಾರ್ಯಕರ್ತೆಯರ ಸಹಕಾರ ಹಾಗೂ ಸಾರಿಗೆ ನೆರವು ಸೇರಿದಂತೆ ಹಲವು ಸೌಲಭ್ಯಗಳನ್ನು ಗ್ರಾಮೀಣ ಮತ್ತು ದೂರದ ಪ್ರದೇಶಗಳ ಗರ್ಭಿಣಿಯರಿಗೆ ಒದಗಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ, “ಪ್ರತಿಯೊಬ್ಬ ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯವು ಸಶಕ್ತ ರಾಷ್ಟ್ರ ನಿರ್ಮಾಣದ ಮೂಲಾಧಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಪ್ರಧಾನಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ ಪರಿಣಾಮಕಾರಿಯಾಗಿ ಜಾರಿಯಾಗಿದ್ದು, ಕರ್ನಾಟಕದಲ್ಲಿ 12 ಲಕ್ಷಕ್ಕೂ ಹೆಚ್ಚು ಅಧಿಕ ಅಪಾಯದ ಗರ್ಭಧಾರಣೆಗಳನ್ನು ಗುರುತಿಸಿ ಸಕಾಲದಲ್ಲಿ ಚಿಕಿತ್ಸೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಸಾವಿರಾರು ತಾಯಂದಿರು ಈ ಯೋಜನೆಯ ಪ್ರಯೋಜನ ಪಡೆಯುತ್ತಿರುವುದು ಸಂತಸದ ಸಂಗತಿ. ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಮಹಿಳೆಯರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ಮೂಲಕ ಸುರಕ್ಷಿತ ತಾಯ್ತನವನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.

Related posts

ಹೊಳೆಹೊನ್ನೂರು : ಹೊಸ ಮಿಷನ್ ಟ್ರಯಲ್ ವೇಳೆ ದುರಂತ: ವಿದ್ಯುತ್ ಶಾಕ್‌ಗೆ ಪೇಂಟರ್ ಸಾವು

JanaNota Editor

ಶಿವಮೊಗ್ಗ ಅರಣ್ಯ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಒತ್ತಾಯ

JanaNota Editor

ಬಿಸಿಯೂಟ ತಯಾರಕರ ಬಾಕಿ ವೇತನ ಬಿಡುಗಡೆಗೆ ಆಗ್ರಹ; ಡಿಸಿಗೆ ಮನವಿ

JanaNota Editor