ಶಿವಮೊಗ್ಗ: ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬರಿ ಬೇಸರವಲ್ಲ, ಬದಲಾಗಿ ಅತೀವ ನೋವುಂಟಾಗಿದೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಸಾಗರದಲ್ಲಿಂದು ಮಾತನಾಡಿರುವ ಅವರು, ಸಿಎಂ ಮಾತಿಗೆ ಗೌರವ ನೀಡಿ ನೋವನ್ನು ನುಂಗಿಕೊಂಡಿದ್ದೇನೆ. ಸದ್ಯ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದೇನೆ. ಸಚಿವ ಸ್ಥಾನದ ಪಟ್ಟಿಯಲ್ಲಿ ಹೆಸರು ಇತ್ತು.
ಕೊನೇ ಕ್ಷಣದವರೆಗೂ ನನ್ನ ಹೆಸರು ಇತ್ತು, ಆದರೆ ಕೊನೆಯದಾಗಿ ಹೆಸರು ಬದಲಾಗಿದೆ. ಸಂಪುಟ ಸೇರ್ಪಡೆಗಾಗಿ ಕೊನೆಯ ಕ್ಷಣದವರೆಗೂ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೆ, ಆದರೆ, ಕೊನೆಯ ಘಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಲು ಕಾರಣವೇನು ಎಂಬುದು ತಿಳಿಯುತ್ತಿಲ್ಲ ಎಂದರು.
ಬಿಜೆಪಿ ಸೇರ್ಪಡೆ ಸುದ್ದಿ ಸಂಪೂರ್ಣ ಸುಳ್ಳು: ನಾನು ಬಿಜೆಪಿ ಸೇರ್ಪಡೆ ಆಗುತ್ತೇನೆ ಎಂಬುದು ಸುಳ್ಳು. ನಾನು ಬಿಜೆಪಿ ಸೇರಲು ಕರೆ ಮಾಡಿದ್ದಕ್ಕೆ ಸೂಕ್ತ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಬಿಜೆಪಿಯಲ್ಲಿ ಆತ್ಮೀಯರಿದ್ದಾರೆ. ಸಚಿವ ಸ್ಥಾನ ಸಿಗದಿದ್ದಾಗ ಸಾಂತ್ವನ ಹೇಳಿದ್ದಾರಷ್ಟೇ. ಆದರೆ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಬೆಂಬಲವಿರುವಾಗ ಬಿಜೆಪಿ ಯಾಕೆ ಹೋಗೋಣ ಎಂದು ಕೇಳಿದರು.
‘ಮನೆಯೊಂದು ಮೂರು ಬಾಗಿಲಾಗಿರುವ’ ಬಿಜೆಪಿಗೆ ಹೋಗಲು ನನಗೇನು ತಲೆ ಕೆಟ್ಟಿದೆಯೇ ಎಂದು ಮರುಪ್ರಶ್ನಿಸಿದರು.
