ಜನ ನೋಟ
ಶಿವಮೊಗ್ಗ

ಶಿವಮೊಗ್ಗದಲ್ಲಿ ಹೊಸ ಸೈಬರ್ ವಂಚನೆ : ಬುಕ್ ರೀಡಿಂಗ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

ಶಿವಮೊಗ್ಗ: ಪುಸ್ತಕ ಓದುವುದರ ಜೊತೆಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಂದ ಸೈಬರ್ ವಂಚಕರು ₹3.33 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರಂಭದಲ್ಲಿ ಲಾಭ ನೀಡಿ ನಂಬಿಕೆ ಗಳಿಸಿದ ವಂಚಕರು

ದೂರುದಾರ ಮಹಿಳೆಗೆ ಅವರ ದೂರದ ಸಂಬಂಧಿಯೊಬ್ಬರು ಕರೆ ಮಾಡಿ Future Book See Technology Ltd ಕಂಪನಿಯ FBT ಆಪ್ ಕುರಿತು ಮಾಹಿತಿ ನೀಡಿದ್ದಾರೆ. ಆಪ್ ಮೂಲಕ ಹಣ ಹೂಡಿಕೆ ಮಾಡಿ ಪುಸ್ತಕಗಳನ್ನು ಓದಿದರೆ ಉತ್ತಮ ಲಾಭ ಗಳಿಸಬಹುದು ಎಂದು ತಿಳಿಸಿ, ಆಪ್‌ಗೆ ಸೇರ್ಪಡೆಯಾಗಲು ಲಿಂಕ್‌ವೊಂದನ್ನು ಕಳುಹಿಸಿದ್ದಾರೆ.

ಇದನ್ನು ನಂಬಿದ ಮಹಿಳೆ ಆಪ್ ಮೂಲಕ ಪುಸ್ತಕ ಓದುವ ಉದ್ದೇಶದಿಂದ ಹಣ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಆರಂಭದ ಒಂದೆರಡು ಬಾರಿ ಹೂಡಿಕೆ ಮಾಡಿದ ಹಣಕ್ಕೆ ಸ್ವಲ್ಪ ಪ್ರಮಾಣದ ಲಾಭವನ್ನು ಅವರ ಖಾತೆಗೆ ವಾಪಸ್ ಜಮೆ ಮಾಡಲಾಗಿದೆ. ಇದರಿಂದ ಆಪ್ ನಿಜವಾಗಿಯೂ ಲಾಭ ನೀಡುತ್ತದೆ ಎಂದು ಮಹಿಳೆ ನಂಬಿದ್ದಾರೆ.

ಹಂತ ಹಂತವಾಗಿ ₹3,33,150 ವರ್ಗಾವಣೆ

ಬಳಿಕ ವಂಚಕರು ನೀಡಿದ ವಿವಿಧ ಯುಪಿಐ ಐಡಿಗಳಿಗೆ ಮಹಿಳೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದು, ಒಟ್ಟು ₹3,33,150 ಹಣ ಪಾವತಿಸಿದ್ದಾರೆ.

ಆದರೆ ಕಳೆದ ಒಂದು ತಿಂಗಳಿನಿಂದ ಹೂಡಿಕೆ ಮಾಡಿದ ಮೂಲ ಹಣವಾಗಲಿ, ಲಾಭದ ಮೊತ್ತವಾಗಲಿ ವಾಪಸ್ ಬಂದಿಲ್ಲ. ಇದರಿಂದ ಅನುಮಾನಗೊಂಡ ಮಹಿಳೆ ಈ ವಿಚಾರವನ್ನು ಪತಿಯೊಂದಿಗೆ ಹಂಚಿಕೊಂಡಿದ್ದಾರೆ. ಪರಿಶೀಲಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಇಬ್ಬರಿಗೂ ತಿಳಿದುಬಂದಿದೆ.

ಪೊಲೀಸರಿಗೆ ದೂರು

Future Book See Technology Ltd ಕಂಪನಿಯ ಹೆಸರನ್ನು ಬಳಸಿಕೊಂಡು FBT ಆಪ್ ಮೂಲಕ ‘ಬುಕ್ ರೀಡಿಂಗ್’ ಹೆಸರಿನಲ್ಲಿ ಹಣ ಪಡೆದು ವಂಚಿಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು, ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಸಂತ್ರಸ್ತೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಣ ವರ್ಗಾವಣೆಯಾದ ಖಾತೆಗಳು ಹಾಗೂ ಯುಪಿಐ ಐಡಿಗಳ ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

Related posts

8,355 ಹೊಸ ಕೊಠಡಿಗಳ ನಿರ್ಮಾಣ: ಮಧು ಬಂಗಾರಪ್ಪ

JanaNota Editor

ಮಕ್ಕಳೊಂದಿಗೆ ಕೆಸರು ಗದ್ದೆಗಿಳಿದ PSI; ಭತ್ತದ ನಾಟಿ ಮಾಡಿ ಕೃಷಿ ಪಾಠ

JanaNota Editor

ದಿನ ಭವಿಷ್ಯ 13.08.2026

JanaNota Editor