ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಕಟ್ಟೆ ಚೌಡೇಶ್ವರಿ–ಸಯ್ಯಿದ್ ಸಾದತ್ ದರ್ಗಾದಲ್ಲಿ ನಡೆದ ಕಾಣಿಕೆ ಹುಂಡಿ ಎಣಿಕೆ ಕಾರ್ಯದ ನಂತರ ಒಟ್ಟಾರೆ ₹1,01,73,650/- (ಒಂದು ಕೋಟಿ ಒಂದು ಲಕ್ಷದ ಎಪ್ಪತ್ತಮೂರು ಸಾವಿರದ ಆರುನೂರ ಐವತ್ತು ರೂಪಾಯಿಗಳು ಮಾತ್ರ) ನಗದು ಸಂಗ್ರಹವಾಗಿದೆ. ಇದರ ಜೊತೆಗೆ ಭಕ್ತಾದಿಗಳಿಂದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳೂ ಕಾಣಿಕೆಯಾಗಿ ಸ್ವೀಕೃತಗೊಂಡಿರುತ್ತವೆ.
ಸಂಗ್ರಹವಾದ ನಗದು ಮೊತ್ತವನ್ನು ನಿಯಮಾನುಸಾರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಈ ಹುಂಡಿ ಎಣಿಕೆ ಕಾರ್ಯವನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಕುಮಾರ್ ಹಾಗೂ ಎಸಿ ಡಾ.ಮೈತ್ರಿ, ಉಪವಿಭಾಗಾಧಿಕಾರಿಗಳು ರವರು ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರಂಜಿತ್, ಮುಜರಾಯಿ ತಹಸೀಲ್ದಾರ್ ಆರ್. ಪ್ರದೀಪ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ ಹಾಗೂ ಸಮಿತಿಯ ಸರ್ವ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಗ್ರಾಮ ಸಹಾಯಕರು, ದೇವಸ್ಥಾನದ ಸಿಬ್ಬಂದಿಗಳು, ಬ್ಯಾಂಕ್ ಸಿಬ್ಬಂದಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
