ಶಿವಮೊಗ್ಗ, ಆ. 5: ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ವಲಯ ಕ್ರೀಡಾಕೂಟದಲ್ಲಿ ಹರಿಗೆ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಲಕಾದ್ರಿಹಳ್ಳಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಖೋ ಖೋ ಸ್ಪರ್ಧೆಯಲ್ಲಿ ಬಾಲಕರ ಹಾಗೂ ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿವೆ. ರಿಲೇ ಸ್ಪರ್ಧೆಯಲ್ಲಿಯೂ ಬಾಲಕರ ಹಾಗೂ ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಗಳಿಸಿವೆ.
ವೈಯಕ್ತಿಕ ವಿಭಾಗದಲ್ಲಿ ಬಾಲಕಿಯರ 100 ಮೀಟರ್ ಮತ್ತು 600 ಮೀಟರ್ ಓಟದಲ್ಲಿ ಸುಮ ಪ್ರಥಮ ಸ್ಥಾನ, 200 ಮೀಟರ್ ಓಟದಲ್ಲಿ ರಾಜೇಶ್ವರಿ ದ್ವಿತೀಯ ಸ್ಥಾನ ಹಾಗೂ ವರ್ಷಿಣಿ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ ಶ್ರೇಯಸ್ 100 ಮೀಟರ್ ಓಟ ಹಾಗೂ ಉದ್ದಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಷಣ್ಮುಖ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಇದೇ ವೇಳೆ ಬಾಲಕಿಯರ ಉದ್ದಜಿಗಿತದಲ್ಲಿ ದ್ವಿತೀಯ ಸ್ಥಾನ ಹಾಗೂ ಎತ್ತರ ಜಿಗಿತದಲ್ಲಿ ಸುಮ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಒಟ್ಟಾರೆ ಹತ್ತುಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿದ ಚಿಲಕಾದ್ರಿಹಳ್ಳಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
