ವರದಿ: ಸನತ್ ಶಿವಮೊಗ್ಗ
ಶಿವಮೊಗ್ಗ ಸೆ.1:ಇತ್ತೀಚೆಗಷ್ಟೆ ಶಿವಮೊಗ್ಗ ನಗರದ ಹೋಟೆಲ್, ಬೇಕರಿ, ಸರ್ಕಾರಿ ಹಾಸ್ಟೆಲ್ ಗಳಗೆ ದಿಡೀರ್ ಭೇಟಿಯಿತ್ತು ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದ್ದ ಉಪ ವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ನೇತೃತ್ವದ ಅಧಿಕಾರಿ ತಂಡವು, ಸೆಪ್ಟೆಂಬರ್ 1 ರಂದು ನಗರದ ಫುಡ್ ಕೋರ್ಟ್ ಗಳಿಗೆ ದಿಡೀರ್ ಭೇಟಿಯಿತ್ತು ಪರಿಶೀಲಿಸಿತು.
ಗೋಪಿ ಸರ್ಕಲ್ ಸಮೀಪದ ಮಲ್ಲಿಕಾರ್ಜುನ ಚಿತ್ರಮಂದಿರ ಪಕ್ಕದ ಸಸ್ಯಹಾರಿ ಫುಡ್ ಕೋರ್ಟ್ ಹಾಗೂ ಸವಾರ್ ಲೈನ್ ರಸ್ತೆಯ ನಾನ್’ವೆಜ್ ಫುಡ್’ಕೋರ್ಟ್ ಗೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.
ಆಹಾರ ತಯಾರಿಕೆ ವೇಳೆ ಗುಣಮಟ್ಟ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ, ಆರೋಗ್ಯಕ್ಕೆ ಹಾನಿಕಾರಕವಾದ, ನಿಷೇಧಿತ ರಾಸಾಯನಿಕಗಳನ್ನ ಆಹಾರ ತಯಾರಿಕೆ ವೇಳೆ ಬಳಕೆ ಮಾಡಬಾರದು. ಅಸ್ವಚ್ಛತೆ ಇರಬಾರದು. ನಿಗದಿತ ಗುಣಮಟ್ಟದ ಅಡುಗೆ ಎಣ್ಣೆ ಬಳಸುವುದು ಸೇರಿದಂತೆ ಹಲವು ಸಲಹೆ – ಸೂಚನೆಗಳನ್ನು ವ್ಯಾಪಾರಿಗಳಿಗೆ ಅಧಿಕಾರಿಗಳ ತಂಡ ನೀಡಿತು.
ಇದೆ ವೇಳೆ ಕೆಲ ವ್ಯಾಪಾರಿಗಳು ತಯಾರಿಸಿದ್ದ ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿದ ಅಧಿಕಾರಿಗಳ ತಂಡ, ಪ್ರಯೋಗಾಲಯದ ತಪಾಸಣೆಗೆ ಕೊಂಡೊಯ್ದಿತು.
ಆಹಾರದ ಗುಣಮಟ್ಟ ಪರಿಶೀಲನೆ ಉದ್ದೇಶದಿಂದ ಕಳೆದ ಕೆಲ ದಿನಗಳಿಂದ ವಿವಿಧೆಡೆ ದಿಡೀರ್ ಭೇಟಿಯಿತ್ತು ಪರಿಶೀಲನೆ ನಡೆಸಲಾಗುತ್ತಿದೆ. ಆಹಾರದ ಗುಣಮಟ್ಟ ಪರಿಶೀಲನೆ ಜೊತೆಗೆ ನಿಯಮಗಳ ಪಾಲನೆ ಮಾಡಲಾಗುತ್ತಿದೆಯೇ ಎಂಬುವುದನ್ನು ಪರಿಶೀಲಿಸಲಾಗುತ್ತಿದೆ. ಭೇಟಿಯ ವೇಳೆ ಕಂಡುಬರುವ ಲೋಪದೋಷಗಳ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್, ಹೆಲ್ತ್ ಇನ್ಸ್’ಪೆಕ್ಟರ್ ಬಸವರಾಜ್, ಮೊದಲಾದವರು ಉಪಸ್ಥಿತರಿದ್ದರು.
