ಶಿವಮೊಗ್ಗ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಬೇಟೆಗೆ ತೆರಳಿದ್ದ ವೇಳೆ ಮೂವರು ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬಲಿಯಾದ ಘಟನೆ ಬೆನ್ನಲ್ಲೇ, ಶಿವಮೊಗ್ಗದಲ್ಲಿ ಅಕ್ರಮ ಬೇಟೆಗೆ ಸಿದ್ಧತೆ ನಡೆಸಿದ್ದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಸಿರಿಗೆರೆ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಲೋಕೇಶ್, ಸಚಿನ್, ಅರುಣ್ ಕುಮಾರ್ ಹಾಗೂ ಸುಬ್ಬರಾಯ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರು ಚೋರಡಿ-ಒಡೆಯರಕೊಪ್ಪ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ಹಣಗೆರೆ ವನ್ಯಜೀವಿ ವಲಯದಲ್ಲಿ ಅಕ್ರಮ ಬೇಟೆಗೆ ಸಂಚು ರೂಪಿಸಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ರಾತ್ರಿ ಸುಮಾರು 11 ಗಂಟೆಗೆ ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎರಡು ನಾಡ ಬಂದೂಕುಗಳು, ಓಮಿನಿ ವಾಹನ, ಮಾರಕಾಸ್ತ್ರಗಳು, ಗನ್ ಪೌಡರ್ ಹಾಗೂ ಬ್ಯಾಟರಿ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
