ನವದೆಹಲಿ: ಮಗುವಿಗೆ ಔಷಧಿ ನೀಡುವ ವಿಚಾರವಾಗಿ ಪತಿ-ಪತ್ನಿಯ ನಡುವೆ ನಡೆದ ವಾಗ್ವಾದ ಭೀಕರ ದುರಂತಕ್ಕೆ ಕಾರಣವಾಗಿದ್ದು, ಪತ್ನಿಯ ಕುಟುಂಬಸ್ಥರು ನಡೆಸಿದ ಎನ್ನಲಾದ ಹಲ್ಲೆಯಲ್ಲಿ 31 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ವಿನಯ್ ಗುಪ್ತಾ ಮೃತಪಟ್ಟಿದ್ದಾರೆ.
ವಿನಯ್ ಗುಪ್ತಾ ಮತ್ತು ಪತ್ನಿ ರೇಖಾ ನಡುವೆ ಮಗುವಿನ ಔಷಧಿ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಪತಿ ತನ್ನನ್ನು ಬೈದಿದ್ದಾರೆ ಎಂಬ ಕಾರಣಕ್ಕೆ ರೇಖಾ ತನ್ನ ತವರು ಮನೆಗೆ ತೆರಳಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು ಎನ್ನಲಾಗಿದೆ.
ಬಳಿಕ ತಂದೆ, ಇಬ್ಬರು ಸಹೋದರರು, ಅತ್ತಿಗೆ ಹಾಗೂ ಇತರ ಸಂಬಂಧಿಕರೊಂದಿಗೆ ರೇಖಾ ದೆಹಲಿಯ ನಿಹಾಲ್ ವಿಹಾರ್‌ನಲ್ಲಿರುವ ಪತಿಯ ಮನೆಗೆ ವಾಪಸಾಗಿದ್ದಾರೆ. ಈ ವೇಳೆ ಮನೆಯ ಬಳಿ ಕುಟುಂಬಸ್ಥರು ಬರುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮನೆಗೆ ಬಂದ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ರೇಖಾ ಕುಟುಂಬದ ಸದಸ್ಯರು ವಿನಯ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿನಯ್ ಅವರ ತಾಯಿ ಹೇಳಿಕೆಯ ಪ್ರಕಾರ, ಅತಿಥಿಗಳಿಗೆ ನೀರು ತರಲು ಅವರು ಒಳಗೆ ಹೋಗಿದ್ದ ಸಂದರ್ಭದಲ್ಲಿ ವಿನಯ್ ಮೇಲೆ ಹಲ್ಲೆ ನಡೆದಿದೆ.
ತೀವ್ರವಾಗಿ ಗಾಯಗೊಂಡ ವಿನಯ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನೋಯ್ಡಾದ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿನಯ್ ಉತ್ತಮ ಸಂಬಳ ಪಡೆಯುತ್ತಿದ್ದರು ಎನ್ನಲಾಗಿದೆ. ಸುಮಾರು ಮೂರೂವರೆ ವರ್ಷಗಳ ಹಿಂದೆ ರೇಖಾ ಅವರನ್ನು ವಿವಾಹವಾಗಿದ್ದ ಅವರಿಗೆ ಗಂಡು ಮತ್ತು ಹೆಣ್ಣು ಮಗು ಇದ್ದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಕೊಲೆಯ ಹಿಂದಿನ ನಿಖರ ಕಾರಣ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಇತರರ ಪಾತ್ರದ ಕುರಿತು ತನಿಖೆ ಮುಂದುವರಿಸಿದ್ದಾರೆ.
