ಮಂಗಳೂರು: ಅಮೆರಿಕ–ಇರಾನ್ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಏರಿಳಿತಗಳು ಕಂಡುಬರುತ್ತಿರುವ ಬೆನ್ನಲ್ಲೇ, ಕರಾವಳಿ ಭಾಗದ ವಾಹನ ಸವಾರರಿಗೆ ಸಿಎನ್‌ಜಿ ದರ ಏರಿಕೆಯ ಬಿಸಿ ತಟ್ಟಿದೆ. ಮಂಗಳೂರಿನಲ್ಲಿ ಸಿಎನ್‌ಜಿ ದರ ಇದೀಗ ಕೆಜಿಗೆ ₹97ಕ್ಕೆ ತಲುಪಿದ್ದು, ₹100ರ ಗಡಿಗೆ ಸಮೀಪಿಸಿದೆ.
ಯುದ್ಧ ಆರಂಭವಾದ ಬಳಿಕ ಮಂಗಳೂರಿನಲ್ಲಿ ಸಿಎನ್‌ಜಿ ದರದಲ್ಲಿ ಒಟ್ಟು ₹20ರಷ್ಟು ಏರಿಕೆಯಾಗಿದೆ. ನಾಲ್ಕು ದಿನಗಳ ಹಿಂದೆ ಏಕಾಏಕಿ ₹2 ಹೆಚ್ಚಳವಾಗಿದ್ದು, ಪರಿಷ್ಕೃತ ದರ ಗುರುವಾರದಿಂದ ಜಾರಿಗೆ ಬಂದಿದೆ. ಪ್ರಸ್ತುತ ಮಂಗಳೂರಿನಲ್ಲಿ ಒಂದು ಕೆಜಿ ಸಿಎನ್‌ಜಿಗೆ ₹97 ಹಾಗೂ ಉಡುಪಿಯಲ್ಲಿ ₹99.70 ದರ ನಿಗದಿಯಾಗಿದೆ.
ಕಡಿಮೆ ವೆಚ್ಚ, ಉತ್ತಮ ಮೈಲೇಜ್ ಹಾಗೂ ಪರಿಸರ ಸ್ನೇಹಿ ಎಂಬ ಕಾರಣಕ್ಕೆ ಹೆಚ್ಚಿನ ಹಣ ನೀಡಿ ಸಿಎನ್‌ಜಿ ವಾಹನಗಳನ್ನು ಖರೀದಿಸಿದ್ದ ವಾಹನ ಮಾಲೀಕರಿಗೆ ಈ ಬೆಳವಣಿಗೆ ಹೊರೆ ಹೆಚ್ಚಿಸಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗಿಂತ ಸಿಎನ್‌ಜಿ ಅಗ್ಗ ಎಂಬ ನಿರೀಕ್ಷೆಯಲ್ಲಿ ಹಲವು ಮಂದಿ ತಮ್ಮ ಹಳೆಯ ವಾಹನಗಳನ್ನೂ ಸಿಎನ್‌ಜಿಗೆ ಪರಿವರ್ತಿಸಿಕೊಂಡಿದ್ದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ಅನಿಲದ ಬೆಲೆ ಏರಿಕೆಯಾಗುತ್ತಿರುವುದು ದರ ಪರಿಷ್ಕರಣೆಗೆ ಕಾರಣ ಎಂದು ಕಂಪನಿಗಳು ಹೇಳುತ್ತಿವೆ. ಆದರೆ ಸತತ ದರ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ವಾಹನ ಸವಾರರು, “ಇಂಧನ ದರ ಯಾವಾಗ ಇಳಿಯಲಿದೆ?” ಎಂದು ಎದುರು ನೋಡುತ್ತಿದ್ದಾರೆ.
