ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ, ವಸ್ತುಗಳ ಅಂತರ್ಜಾಲ, ದೂರ ಸಂವೇದಿ ತಂತ್ರಜ್ಞಾನ ಹಾಗೂ ಸ್ಮಾರ್ಟ್ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಶಿವಮೊಗ್ಗದ ಪಿಇಎಸ್ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆ ಹಾಗೂ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ನಡುವೆ ಮಹತ್ವದ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಮಾಹಿತಿ, ತಂತ್ರಜ್ಞಾನ ಹಾಗೂ ಕೌಶಲ್ಯ ವಿನಿಮಯ, ಜಂಟಿ ಸಂಶೋಧನಾ ಯೋಜನೆಗಳನ್ನು ರೂಪಿಸುವುದು, ಪ್ರಯೋಗಾಲಯಗಳು ಹಾಗೂ ಇತರೆ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಒಪ್ಪಂದದ ಪ್ರಮುಖ ಉದ್ದೇಶಗಳಾಗಿವೆ.

ಇದರ ಜೊತೆಗೆ ನಿಖರ ಕೃಷಿ ಸಂಶೋಧನೆ, ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಕಾರ್ಯಾನುಭವದ ಅವಕಾಶ ಕಲ್ಪಿಸುವುದು ಹಾಗೂ ರೈತರಿಗೆ ಸುಧಾರಿತ ತಂತ್ರಜ್ಞಾನ ಆಧಾರಿತ ನೆರವು ಒದಗಿಸುವ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳು ಸಹಯೋಗದಲ್ಲಿ ಕಾರ್ಯನಿರ್ವಹಿಸಲಿವೆ.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ, ಕುಲಸಚಿವ ಡಾ. ಶಾಮರಾವ್ ಜಹಗೀರದಾರ್, ಸಂಶೋಧನಾ ನಿರ್ದೇಶಕ ಡಾ. ಶ್ರೀಧರ್, ಪಿಇಎಸ್ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ. ಡಿ.ಆರ್. ಸ್ವಾಮಿ, ಉಪಪ್ರಾಂಶುಪಾಲ ಡಾ. ಶೇಖರ್ ಆರ್., ಪ್ರಾಧ್ಯಾಪಕರಾದ ಡಾ. ನವೀನ್ ಎನ್.ಎಂ. ಹಾಗೂ ಡಾ. ಚೇತನ್ ಎಲ್.ಎಸ್. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಒಡಂಬಡಿಕೆ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು.
