ನೊಂದ ನಾಗರೀಕರು
ಶಿವಮೊಗ್ಗ: ನಗರದ ಪಾರ್ಕ್ ಬಡಾವಣೆಯಲ್ಲಿ ವಿವಿಧ ಖಾಸಗಿ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಇದರ ಜೊತೆಗೆ ಹಲವು ವಾಣಿಜ್ಯ ಕೇಂದ್ರಗಳೂ ಇರುವುದರಿಂದ ಈ ಭಾಗದಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಆಸ್ಪತ್ರೆಗಳಿಗೆ ಆಗಮಿಸುವ ರೋಗಿಗಳು ಹಾಗೂ ಸಾರ್ವಜನಿಕರ ವಾಹನಗಳನ್ನು ನಿಲುಗಡೆ ಮಾಡಲು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ವಾಹನ ನಿಲುಗಡೆಗಾಗಿ ಮೀಸಲಿಟ್ಟಿರುವ ಸೆಲ್ಲರ್‌ಗಳನ್ನೂ ಆಸ್ಪತ್ರೆಯ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಆಸ್ಪತ್ರೆಗೆ ಬರುವವರು ಅನಿವಾರ್ಯವಾಗಿ ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದು, ಇದರಿಂದ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.
ಆಸ್ಪತ್ರೆ ಆಡಳಿತ ಮಂಡಳಿಗಳು ತಮ್ಮಲ್ಲಿಗೆ ಬರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಾಗಿತ್ತು. ಅದೇ ರೀತಿ ವಾಣಿಜ್ಯ ಕೇಂದ್ರಗಳೂ ತಮ್ಮ ಗ್ರಾಹಕರ ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ ಮಾಡಬೇಕಿತ್ತು. ಆದರೆ ಈ ನಿಟ್ಟಿನಲ್ಲಿ ಸಮರ್ಪಕ ಕ್ರಮ ಕೈಗೊಳ್ಳದ ಪರಿಣಾಮ ಪಾರ್ಕ್ ಬಡಾವಣೆಯಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.

ಚಾರುಲತಾ ಸೋಮಲ್ ದಿಟ್ಟ ಕ್ರಮ ಈಗ ನೆನಪು
ಕೆಲವು ವರ್ಷಗಳ ಹಿಂದೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಚಾರುಲತಾ ಸೋಮಲ್ ಅವರು ನಗರದ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಲ್ಲಿರುವ ಆಸ್ಪತ್ರೆಗಳು ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗವನ್ನು ಇತರೆ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದರ ವಿರುದ್ಧ ದಿಟ್ಟ ಕ್ರಮ ಕೈಗೊಂಡಿದ್ದರು.
ಜೆಸಿಬಿ ಹಾಗೂ ಸಂಬಂಧಿಸಿದ ಇಲಾಖೆಗಳ ಸಹಕಾರದೊಂದಿಗೆ ಪಾರ್ಕಿಂಗ್ ಸ್ಥಳಗಳಲ್ಲಿದ್ದ ಅಕ್ರಮ ವಾಣಿಜ್ಯ ಚಟುವಟಿಕೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿತ್ತು. ಸತತ ಐದು ದಿನಗಳ ಕಾಲ ನಡೆದ ಈ ಕಾರ್ಯಾಚರಣೆ ಸಾರ್ವಜನಿಕರ ಗಮನ ಸೆಳೆದಿತ್ತು.
ಆದರೆ, ಚಾರುಲತಾ ಸೋಮಲ್ ಅವರ ವರ್ಗಾವಣೆಯ ನಂತರ ಆ ರೀತಿಯ ದಿಟ್ಟ ಕಾರ್ಯಾಚರಣೆ ಮುಂದುವರಿಯಲಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನವಾಗಿದೆ. ತೆರವುಗೊಂಡಿದ್ದ ಹಲವು ಸೆಲ್ಲರ್‌ಗಳಲ್ಲಿ ಮತ್ತೆ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿವೆ ಎಂಬ ಆರೋಪವೂ ಕೇಳಿಬರುತ್ತಿದೆ.
ಪಾರ್ಕಿಂಗ್ ಜಾಗವೇ ವಾಣಿಜ್ಯ ಚಟುವಟಿಕೆಗೆ?

ಪಾರ್ಕಿಂಗ್‌ಗಾಗಿ ಮೀಸಲಿಟ್ಟಿರುವ ಸೆಲ್ಲರ್‌ಗಳು ಇತರೆ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವುದರಿಂದ ನಗರದ ಬಹುತೇಕ ಭಾಗಗಳಲ್ಲಿ ವಾಹನ ನಿಲುಗಡೆ ಸಮಸ್ಯೆ ಉಲ್ಬಣಗೊಂಡಿದೆ. ಅದರಲ್ಲೂ ಪಾರ್ಕ್ ಬಡಾವಣೆಯ ಆಸ್ಪತ್ರೆಗಳ ಸುತ್ತಮುತ್ತ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಪಾರ್ಕಿಂಗ್ ಹಾಗೂ ಸಂಚಾರ ಸಮಸ್ಯೆ ಕೇವಲ ಪಾರ್ಕ್ ಬಡಾವಣೆಗೆ ಸೀಮಿತವಾಗಿಲ್ಲ. ನಗರದ ಹಲವು ಪ್ರಮುಖ ಪ್ರದೇಶಗಳಲ್ಲೂ ಪ್ರತಿನಿತ್ಯ ಇದೇ ಸಮಸ್ಯೆ ಎದುರಾಗುತ್ತಿದೆ. ಇದರ ನಡುವೆಯೇ ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳಿಗೆ ವಾಹನಗಳಲ್ಲಿ ಸಂಚರಿಸಬೇಕಾಗಿದೆ.
ಆಸ್ಪತ್ರೆಗಳು ಹಾಗೂ ವಾಣಿಜ್ಯ ಕೇಂದ್ರಗಳಿಗೆ ಮೀಸಲಾದ ಪಾರ್ಕಿಂಗ್ ಸ್ಥಳಗಳನ್ನು ಅದೇ ಉದ್ದೇಶಕ್ಕೆ ಬಳಸಲು ಅವಕಾಶ ಮಾಡಿಕೊಟ್ಟರೆ, ಸಂಚಾರ ದಟ್ಟಣೆ ಸಮಸ್ಯೆಯ ಬಹುಪಾಲು ಕಡಿಮೆಯಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕನ್ಸರ್‌ವೆನ್ಸಿ ಸ್ಥಳಗಳ ಬಳಕೆ ಅಗತ್ಯ

ಇದರ ಜೊತೆಗೆ ಮಹಾನಗರ ಪಾಲಿಕೆಗೆ ಸೇರಿದ ಕನ್ಸರ್‌ವೆನ್ಸಿ ಹಾಗೂ ಇತರೆ ಸೂಕ್ತ ಸ್ಥಳಗಳನ್ನು ಗುರುತಿಸಿ ಅವುಗಳನ್ನು ವಾಹನ ನಿಲುಗಡೆಗೆ ಬಳಸಿಕೊಳ್ಳುವ ಬಗ್ಗೆಯೂ ಪಾಲಿಕೆ ಚಿಂತನೆ ನಡೆಸಬೇಕಿದೆ.
ಈಗಾಗಲೇ ಸಂಚಾರಿ ಪೊಲೀಸರು ಫುಟ್‌ಪಾತ್‌ಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಆಸ್ಪತ್ರೆಗಳು ಹೆಚ್ಚಿರುವ ಪ್ರದೇಶಗಳಲ್ಲಿರುವ ಹಲವು ಕನ್ಸರ್‌ವೆನ್ಸಿಗಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಅವುಗಳ ಸಮರ್ಪಕ ಬಳಕೆಯಾಗುತ್ತಿಲ್ಲ ಎಂಬ ಆರೋಪವಿದೆ. ಇಂತಹ ಸ್ಥಳಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಪಾರ್ಕಿಂಗ್ ಸಮಸ್ಯೆ ತಗ್ಗಿಸಲು ಸಾಧ್ಯವಾಗಲಿದೆ.
ಅಂಬ್ಯುಲೆನ್ಸ್‌ಗಳಿಗೂ ಜಾಗವಿಲ್ಲ!

ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಹಾಗೂ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಂಚಾರ ವಿಭಾಗದ ಇನ್ಸ್‌ಪೆಕ್ಟರ್ ದೇವರಾಜ್ ಮತ್ತು ತಂಡ ನಗರದಲ್ಲಿ ಸಂಚಾರ ಸುವ್ಯವಸ್ಥೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇದೇ ರೀತಿಯ ಕ್ರಮವನ್ನು ಪಾರ್ಕ್ ಬಡಾವಣೆಯ ಆಸ್ಪತ್ರೆಗಳ ಸುತ್ತಮುತ್ತಲೂ ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಕನ್ಸರ್‌ವೆನ್ಸಿ ಹಾಗೂ ಆಸ್ಪತ್ರೆಗಳ ಪಾರ್ಕಿಂಗ್‌ಗಾಗಿ ಮೀಸಲಾದ ಸೆಲ್ಲರ್‌ಗಳನ್ನು ವಾಹನ ನಿಲುಗಡೆಗೆ ಬಳಸಲು ಅವಕಾಶ ಕಲ್ಪಿಸಿದರೆ ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ವಿಶೇಷವೆಂದರೆ, ರೋಗಿಗಳ ಜೀವ ಉಳಿಸಲು ಧಾವಿಸುವ ಅಂಬ್ಯುಲೆನ್ಸ್‌ಗಳಿಗೂ ಕೆಲವೊಮ್ಮೆ ಆಸ್ಪತ್ರೆಗಳ ಮುಂದೆ ನಿಲ್ಲಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ವಿಪರ್ಯಾಸವೆನಿಸಿದರೂ, ಪಾರ್ಕ್ ಬಡಾವಣೆಯಲ್ಲಿ ಪ್ರತಿನಿತ್ಯ ಕಂಡುಬರುವ ವಾಸ್ತವದ ನಿದರ್ಶನವಾಗಿದೆ.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರು ಸಮನ್ವಯದಿಂದ ಕಾರ್ಯನಿರ್ವಹಿಸಿ ಪಾರ್ಕಿಂಗ್ ಮತ್ತು ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
