ಉಡುಪಿ: ದೇಶದ ಹಲವೆಡೆ ಇತ್ತೀಚೆಗೆ ಆಹಾರ ಸುರಕ್ಷಾ ಅಧಿಕಾರಿಗಳು ಹಲವೆಡೆ ದಾಳಿ ಮಾಡಿ ಸೇವಿಸಲು ಯೋಗ್ಯವಲ್ಲದ ಉತ್ಪನ್ನಗಳನ್ನು ಪತ್ತೆ ಮಾಡಿದ ಘಟನೆಗಳು ವರದಿಯಾಗಿದೆ. ಸ್ಟಾರ್ ಹೋಟೆಲ್ ಗಳ ಮೇಲೂ ದಾಳಿ ನಡೆಸಿದ್ದ ಬಗ್ಗೆ ಸುದ್ದಿಯಾಗಿತ್ತು. ಆದರೆ ಇದೀಗ ಸಾಮಾನ್ಯರೂ ಬಳಕೆ ಮಾಡುವಂತಹ ಬಾಳೆ ಹಣ್ಣಿಗೂ ಕೃತಕ ಬಣ್ಣ ಹಚ್ಚಿ ಅಕ್ರಮ ನಡೆಸುವ ಜಾಲ ಉಡುಪಿಯಲ್ಲಿ ಬಯಲಾಗಿದೆ.
ಗುರುವಾರ (ಆ.20) ಉಡುಪಿ ತಾಲೂಕಿನ ಅಲೆವೂರು ಎಂಬಲ್ಲಿ ಕುಂದಾಪುರ ಎಸಿ ನೇತೃತ್ವದಲ್ಲಿ ಬಾಳೆಕಾಯಿ ಮಂಡಿಗೆ ದಾಳಿ ಮಾಡಲಾಗಿದೆ. ಈ ವೇಳೆ ನಕಲಿ ಬಣ್ಣ ಹಚ್ಚಿ ಮಾರಾಟ ಆಡುತ್ತಿದ್ದ ಸುಮಾರು 5 ಸಾವಿರ ಕೆಜಿ ಬಾಳೆಕಾಯಿಗಳನ್ನು ಸೀಜ್ ಮಾಡಲಾಗಿದೆ. ಇದರ ಮೌಲ್ಯ ಸುಮಾರು 4 ಲಕ್ಷ ರೂ ಎಂದು ಅಂದಾಜಿಸಲಾಗಿದೆ.
ಇದೇ ವೇಳೆ ಅದಕ್ಕೆ ಬಳಸುತ್ತಿದ್ದ ರಾಸಾಯನಿಕಗಳನ್ನು ವಶಕ್ಕೆ ಪಡೆದಿದ್ದು, ಎಡಿಸಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಖಚಿತ ಮಾಹಿತಿ ಮೇರೆಗೆ ಉಪ ವಿಭಾಗಾಧಿಕಾರಿ ರಶ್ಮಿ ನೇತೃತ್ವದ ತಂಡವು ಅಲೆವೂರಿನ ಮೂರು ಕಡೆ ಗುರುವಾರ ಬೆಳಗ್ಗೆ ದಾಳಿ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ತಂಡದಲ್ಲಿ ಆರೋಗ್ಯ ಪರಿವೀಕ್ಷಣಾಧಿಕಾರಿ ವಿವೇಕ್ ತಿರುಮಲ, ತಹಶೀಲ್ದಾರ್ ಗುರುರಾಜ್, ಗ್ರಾಮ ಲೆಕ್ಕಾಧಿಕಾರಿಗಳಾದ ಕಾರ್ತಿಕ್ ಭಟ್, ವಿಜಯ, ಆಹಾರ ನಿರೀಕ್ಷಕ ಲೀಲಾನಂದ ಇದ್ದರು.
