ಜನ ನೋಟ
ಶಿವಮೊಗ್ಗ

ಶಿವಮೊಗ್ಗ: ಹಣ ಕಡಿತ, ದೂರು ನಿರ್ಲಕ್ಷ್ಯ: ಯೂನಿಯನ್ ಬ್ಯಾಂಕ್‌ಗೆ ಬಡ್ಡಿ ಸಮೇತ ಪಾವತಿ ಆದೇಶ

ಶಿವಮೊಗ್ಗ : ಗ್ರಾಹಕರ ಅನುಮತಿಯಿಲ್ಲದೆ ಬ್ಯಾಂಕ್ ಖಾತೆಯಿಂದ ₹7 ಲಕ್ಷ ಕಡಿತಗೊಂಡ ಪ್ರಕರಣದಲ್ಲಿ, ಬಾಕಿ ಹಣವನ್ನು ಹಿಂತಿರುಗಿಸಲು ವಿಳಂಬ ಮಾಡಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಚಾಟಿ ಬೀಸಿದೆ.

ಶಿವಮೊಗ್ಗದ ನಂದಿನಿ ಬಡಾವಣೆಯ ನಿವಾಸಿ ಜೂಲಿ ಎಸ್.ಪಿ. ಅವರು ವಿನೋಬನಗರದ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು. 2024ರ ಮೇ 3ರಂದು ಅವರ ಖಾತೆಯಿಂದ ಮೂರು ಬಾರಿ ವ್ಯವಹಾರ ನಡೆದಿದ್ದು, ಒಟ್ಟು ₹7 ಲಕ್ಷ ಕಡಿತಗೊಂಡಿರುವ ಬಗ್ಗೆ ಮೊಬೈಲ್ ಸಂದೇಶ ಬಂದಿತ್ತು. ತಾವು ಯಾವುದೇ ಒಟಿಪಿ ಹಂಚಿಕೊಂಡಿಲ್ಲ ಹಾಗೂ ಯಾವುದೇ ವ್ಯವಹಾರ ನಡೆಸಿಲ್ಲ ಎಂದು ಅವರು ಬ್ಯಾಂಕ್‌ಗೆ ತಕ್ಷಣ ದೂರು ನೀಡಿದ್ದರು.

ಬ್ಯಾಂಕ್‌ನಿಂದ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಜೂಲಿ ಅವರು 2024ರ ಅ.25ರಂದು ಕಾನೂನು ನೋಟಿಸ್ ನೀಡಿದ್ದರು. ಬಳಿಕ ನ.30ರಂದು ಬ್ಯಾಂಕ್ ₹2,33,333 ಮಾತ್ರ ಖಾತೆಗೆ ಮರುಜಮೆ ಮಾಡಿದ್ದು, ಉಳಿದ ₹4,66,667 ಅನ್ನು ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

ಪ್ರಕರಣದ ದಾಖಲೆಗಳು ಹಾಗೂ ಉಭಯ ಪಕ್ಷಗಳ ವಾದ ಆಲಿಸಿದ ಆಯೋಗವು ಬ್ಯಾಂಕ್‌ನಿಂದ ಸೇವಾ ನ್ಯೂನತೆ ಆಗಿದೆ ಎಂದು ತೀರ್ಮಾನಿಸಿ, ಭಾಗಶಃ ದೂರು ಪುರಸ್ಕರಿಸಿದೆ.

ಆಯೋಗದ ಆದೇಶದಂತೆ, ಬ್ಯಾಂಕ್ ₹4,66,667 ಬಾಕಿ ಮೊತ್ತವನ್ನು 2024ರ ಅ.25ರಿಂದ ವಾರ್ಷಿಕ 8% ಬಡ್ಡಿಯೊಂದಿಗೆ 45 ದಿನಗಳೊಳಗೆ ಪಾವತಿಸಬೇಕು. ಅಲ್ಲದೆ, ಮಾನಸಿಕ ಕಿರುಕುಳ ಮತ್ತು ವೇದನೆಗಾಗಿ ₹25,000 ಹಾಗೂ ವ್ಯಾಜ್ಯದ ವೆಚ್ಚವಾಗಿ ₹10,000 ಪಾವತಿಸಬೇಕು.

45 ದಿನಗಳ ಗಡುವಿನೊಳಗೆ ಹಣ ಪಾವತಿಸದಿದ್ದರೆ, ಸಂಪೂರ್ಣ ಮೊತ್ತಕ್ಕೆ ವಾರ್ಷಿಕ 10% ಬಡ್ಡಿ ವಿಧಿಸಿ, ಹಣ ಪಾವತಿಸುವವರೆಗೆ ಮುಂದುವರಿಸಬೇಕು ಎಂದು ಆಯೋಗ ಆದೇಶಿಸಿದೆ.

ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠ ಈ ಆದೇಶ ನೀಡಿದೆ.

 

Related posts

ಪುನಃ ಒತ್ತುವರಿ ತಡೆಯಲು ಪೊಲೀಸ್ ಸಿಬ್ಬಂದಿ ನಿಯೋಜನೆ

JanaNota Editor

ಪರಿಸರ ಸೂಕ್ಷ್ಮ ವಲಯದಲ್ಲಿ ಯೋಜನೆ, ₹380 ಕೋಟಿ ಪಾವತಿ ಆರೋಪ : ಈಶ್ವರಪ್ಪ ಕಿಡಿ

JanaNota Editor

ಹೊಳೆಹೊನ್ನೂರು : ಹೊಸ ಮಿಷನ್ ಟ್ರಯಲ್ ವೇಳೆ ದುರಂತ: ವಿದ್ಯುತ್ ಶಾಕ್‌ಗೆ ಪೇಂಟರ್ ಸಾವು

JanaNota Editor