ಜನ ನೋಟ
ರಾಜ್ಯ

ಶಿವಮೊಗ್ಗ ಗ್ರಾಮಾಂತರದ ಕೆರೆಗಳಿಗೆ ಕೊಳವೆ ಮಾರ್ಗದ ಮೂಲಕ ನೀರು : ₹22.42 ಕೋಟಿ ಯೋಜನೆಗೆ ತುರ್ತು ಅನುಮೋದನೆಗೆ ಮನವಿ

ಬೆಂಗಳೂರು : ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರೆಗಳಿಗೆ ಕೊಳವೆ ಮಾರ್ಗದ ಮೂಲಕ ನೀರು ತುಂಬಿಸುವ ₹22.42 ಕೋಟಿ ಅಂದಾಜು ವೆಚ್ಚದ ಮಹತ್ವದ ಯೋಜನೆಗೆ ತುರ್ತಾಗಿ ಅನುಮೋದನೆ ನೀಡಿ, ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದ ನಿಯೋಗ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದೆ.

ಬೆಂಗಳೂರಿನಲ್ಲಿ ನಿನ್ನೆ ಸಚಿವರನ್ನು ಭೇಟಿ ಮಾಡಿದ ನಿಯೋಗ, ಶಿವಮೊಗ್ಗ ಗ್ರಾಮಾಂತರ ಭಾಗದ ರೈತರು ಹಲವು ವರ್ಷಗಳಿಂದ ಎದುರಿಸುತ್ತಿರುವ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯ ತುರ್ತು ಅಗತ್ಯವನ್ನು ಸಚಿವರ ಗಮನಕ್ಕೆ ತಂದಿತು.

ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯಕ್, ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ಸಿಂಗನಹಳ್ಳಿ ಸುರೇಶ್ ಸೇರಿದಂತೆ ಪ್ರಮುಖ ರೈತ ಮುಖಂಡರು ಉಪಸ್ಥಿತರಿದ್ದರು.

7,310 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ

ತುಂಗಾ ನದಿಯಿಂದ 1.347 ಟಿಎಂಸಿ ನೀರನ್ನು ಎತ್ತಿ ಶಿವಮೊಗ್ಗ ತಾಲೂಕಿನ ಹಾಯ್‌ಹೊಳೆ, ಬಾರೇಹಳ್ಳ ಹಾಗೂ ಗೌಡನಕೆರೆ ವ್ಯಾಪ್ತಿಯ 7,310 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸುವ ಯೋಜನೆಯೂ ಪ್ರಸ್ತಾವನೆಯಲ್ಲಿ ಒಳಗೊಂಡಿದೆ. ಗ್ರಾಮಾಂತರ ಕ್ಷೇತ್ರದ ವಿವಿಧ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಕಾಮಗಾರಿಗೆ ತುರ್ತು ಅನುಮೋದನೆ ಹಾಗೂ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ.

ಹೊಸಹಳ್ಳಿ ಹಾಗೂ ತುಂಗಾ ಏತ ನೀರಾವರಿ ಯೋಜನೆಗಳಡಿ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಮಾರ್ಗಗಳಿಗೆ ಹಾನಿಯಾಗಿರುವುದು ಹಾಗೂ ಮೇಲ್ಭಾಗದಲ್ಲಿ ನೀರಿನ ಬಳಕೆ ಹೆಚ್ಚಾಗಿರುವುದರಿಂದ ಕೊನೆಯ ಭಾಗದ ಕೆರೆಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದರಿಂದ ರೈತರು ನೀರಾವರಿಗಾಗಿ ಸಂಕಷ್ಟ ಎದುರಿಸುತ್ತಿದ್ದು, ಅಂತರ್ಜಲ ಮಟ್ಟ ಕುಸಿತ, ಜಾನುವಾರುಗಳಿಗೆ ನೀರಿನ ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ಉಂಟಾಗುತ್ತಿದೆ.

ಎರಡು ಹಂತಗಳಲ್ಲಿ ಕಾಮಗಾರಿ

ಈ ಹಿನ್ನೆಲೆಯಲ್ಲಿ ಎರಡು ಹಂತಗಳಲ್ಲಿ ಕೊಳವೆ ಮಾರ್ಗದ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಕೈಗೊಳ್ಳಲು ಒಟ್ಟು ₹22.42 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಮೊದಲ ಹಂತಕ್ಕೆ ₹9.76 ಕೋಟಿ, ಎರಡನೇ ಹಂತಕ್ಕೆ ₹9.96 ಕೋಟಿ ಹಾಗೂ ಹೆಚ್ಚುವರಿ ಕಾಮಗಾರಿಗಳಿಗೆ ₹2.70 ಕೋಟಿ ಸೇರಿದಂತೆ ಒಟ್ಟು ₹22.42 ಕೋಟಿ ವೆಚ್ಚವಾಗಲಿದೆ.

ಯೋಜನೆ ಅನುಷ್ಠಾನಗೊಂಡರೆ ಕೊನೆಯ ಭಾಗದ ರೈತರಿಗೂ ನೀರಾವರಿ ಸೌಲಭ್ಯ ಬಲಪಡಿಸುವುದರ ಜೊತೆಗೆ ಅಂತರ್ಜಲ ಮರುಪೂರಣಕ್ಕೂ ಸಹಕಾರಿಯಾಗಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರಿನ ಲಭ್ಯತೆ ಹೆಚ್ಚಾಗುವ ನಿರೀಕ್ಷೆಯಿದೆ.

ಶೀಘ್ರ ಕ್ರಮದ ಭರವಸೆ

ಸಂಸದರ ನೇತೃತ್ವದ ನಿಯೋಗದ ಮನವಿಯನ್ನು ಆಲಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಭಾಗದ ರೈತರ ನೀರಿನ ತುರ್ತು ಅಗತ್ಯವನ್ನು ಪರಿಗಣಿಸಿ, ಪ್ರಸ್ತಾವನೆಯ ಕಡತವನ್ನು ಪರಿಶೀಲಿಸಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಆದ್ಯತೆಯ ಮೇರೆಗೆ ಅನುದಾನ ಬಿಡುಗಡೆಗೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ರೈತರ ನೀರಿನ ಸಮಸ್ಯೆಗಳಿಗೆ ದೀರ್ಘಕಾಲಿಕ ಪರಿಹಾರ ಕಲ್ಪಿಸುವ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರಿನ ಲಭ್ಯತೆ ಖಚಿತಪಡಿಸುವ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ರೈತ ಮುಖಂಡರು ಶ್ಲಾಘಿಸಿದ್ದಾರೆ.

Related posts

ಬಿಗ್‌ಬಾಸ್‌ ಕನ್ನಡ ಸೀಸನ್‌ 13ಕ್ಕೆ ಕಾನೂನು ಸಂಕಷ್ಟ : NOC ನೀಡದಂತೆ ದೂರು

JanaNota Editor

ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ : ಪೇದೆ ಬಂಧನ, ಮತ್ತೊಬ್ಬ ಪರಾರಿ

JanaNota Editor

ಪತ್ನಿಯ ಅಂತ್ಯಕ್ರಿಯೆ ಸಿದ್ಧತೆ ವೇಳೆ ಪತಿಯೂ ಸಾವು

JanaNota Editor