ಶಿವಮೊಗ್ಗ : ಸಿಟಿಯಲ್ಲಿ ಓಡಾಡುವ ಬಸ್‌ಗಳ ರೂಟ್ ಬದಲಾಯಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅವರ ಆದೇಶವನ್ನು ವಾರ್ತಾಇಲಾಖೆ ಪ್ರಕಟಣೆಯಲ್ಲಿ ನೀಡಿದೆ. ವಿವರ ಹೀಗಿದೆ.
ಒಟ್ಟು, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ನಾಲ್ಕು ನಗರ ಸಾರಿಗೆ ಬಸ್‌ಗಳ ಮಾರ್ಗವನ್ನು ಬದಲಾಯಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಟಿ. ಸೀನಪ್ಪ ಶೆಟ್ಟಿ ವೃತ್ತದಿಂದ ಜೆ.ಪಿ.ಎನ್. ರಸ್ತೆ ಮಾರ್ಗವಾಗಿ ಕುವೆಂಪು ರಸ್ತೆ, ಜುವೆಲ್ ರಾಕ್ ಹೋಟೆಲ್ ರಸ್ತೆ ಮತ್ತು ಜೈಲ್ ಸರ್ಕಲ್ ಮೂಲಕ ಲಕ್ಷ್ಮಿ ಟಾಕೀಸ್ ವರೆಗೆ ಭಾರಿ ವಾಹನ ಸಂಚರಿಸುತ್ತಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಈ ರಸ್ತೆಗಳಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸುವಂತೆ ಸಾರ್ವಜನಿಕರು ಹಾಗೂ ವಾಹನ ಸವಾರರು ದೂರು ನೀಡಿದ್ದರು. ಅದರಂತೆ ಎಸ್ಪಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವರದಿಯನ್ನು ಆಧರಿಸಿ ಕೇಂದ್ರ ಮೋಟಾರು ವಾಹನ ಕಾಯ್ದೆಯನ್ವಯ ಡಿಸಿ ಈ ಕ್ರಮ ಕೈಗೊಂಡಿದ್ದಾರೆ.
ವಾಹನ ಸಂಖ್ಯೆ KA-19-F-2246 ಮತ್ತು KA-18-F-4235 ಬಸ್ ಈ ಹಿಂದೆ ಟಿ. ಸೀನಪ್ಪ ಶೆಟ್ಟಿ ವೃತ್ತದಿಂದ ಮೆಗ್ಗಾನ್ ಆಸ್ಪತ್ರೆ, ಜುವೆಲ್ ರಾಕ್ ಹೋಟೆಲ್, ಕುವೆಂಪು ರಸ್ತೆ ಹಾಗೂ ಪಿ ಅಂಡ್ ಟಿ ಕ್ವಾಟ್ರಸ್ ಮೂಲಕ ವಿನೋಬಾ ನಗರಕ್ಕೆ ಸಂಚರಿಸುತ್ತಿದ್ದವು. ಇದೀಗ ಈ ಬಸ್‌ಗಳು ಟಿ. ಸೀನಪ್ಪ ಶೆಟ್ಟಿ ವೃತ್ತದಿಂದ ಬಾಲ ರಾಜ್ ಅರಸ್ ರಸ್ತೆ, ಮಹಾವೀರ್ ಸರ್ಕಲ್ ಹಾಗೂ ಸವಳಂಗ ರಸ್ತೆ ಮಾರ್ಗವಾಗಿ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಅದೇ ರೀತಿ ವಾಹನ ಸಂಖ್ಯೆ KA-18-F-4235 ಹಾಗೂ KA-20-F-2199 ಬಸ್‌ಗಳು ಈ ಹಿಂದೆ ಟಿ. ಸೀನಪ್ಪ ಶೆಟ್ಟಿ ವೃತ್ತದಿಂದ ಜುವೆಲ್ ರಾಕ್ ಹೋಟೆಲ್, ಕುವೆಂಪು ರಸ್ತೆ, ಜೈಲ್ ಸರ್ಕಲ್ ಮೂಲಕ ಲಕ್ಷ್ಮಿ ಟಾಕೀಸ್ ವರೆಗೆ ಸಂಚರಿಸುತ್ತಿದ್ದವು. ಈಗ ಈ ವಾಹನಗಳು ಸಹ ಹಳೆಯ ಮಾರ್ಗವನ್ನು ಬಿಟ್ಟು ಟಿ. ಸೀನಪ್ಪ ಶೆಟ್ಟಿ ವೃತ್ತದಿಂದ ಬಾಲರಾಜ್ ಅರಸ್ ರಸ್ತೆ, ಮಹಾವೀರ್ ಸರ್ಕಲ್ ಹಾಗೂ ಸವಳಂಗ ರಸ್ತೆ ಮಾರ್ಗವಾಗಿ ಸಂಚರಿಸುವಂತೆ ಆದೇಶಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹೊರಡಿಸಲಾದ ಈ ಹೊಸ ಮಾರ್ಗ ಬದಲಾವಣೆ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
