ಜನ ನೋಟ
ರಾಜ್ಯ

ಓವರ್‌ಟೇಕ್‌ ಕೋಪಕ್ಕೆ ಸ್ನೇಹಿತನ ಮೇಲೆ ಹಲ್ಲೆ? : ದುನಿಯಾ ವಿಜಯ್ ಪುತ್ರನ ವಿರುದ್ಧ ದೂರು

ಬೆಂಗಳೂರು: ಕಾರು ಓವರ್‌ಟೇಕ್‌ ಮಾಡಿದ ವಿಚಾರಕ್ಕೆ ಕೋಪಗೊಂಡ ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್‌ ತನ್ನ ಸ್ನೇಹಿತನನ್ನೇ ಕಾರಿನಲ್ಲಿ ಅಪಹರಿಸಿ ಆರು ಮಂದಿ ಸೇರಿಕೊಂಡು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಆರ್‌.ಆರ್‌. ನಗರದ ನಿವಾಸಿ ಹಾಗೂ ಆರ್‌.ವಿ. ವಿಶ್ವವಿದ್ಯಾಲಯದ ವಿದ್ಯಾರ್ಥಿ ಮನೀಶ್‌ ಕೆಂಗೇರಿ ಪೊಲೀಸ್‌ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

ಸೋಮವಾರ ಸಂಜೆ ಸಾಮ್ರಾಟ್‌ ತನ್ನ ಸ್ನೇಹಿತರೊಂದಿಗೆ ಜಿಪ್ಸಿ ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಮನೀಶ್‌ ಐ20 ಕಾರಿನಲ್ಲಿ ವೇಗವಾಗಿ ಚಲಿಸಿ ಜಿಪ್ಸಿ ಕಾರನ್ನು ಓವರ್‌ಟೇಕ್‌ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ನೂಕಾಟ-ತಳ್ಳಾಟವೂ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಾದ ಬಳಿಕ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಮಂಗಳವಾರ ಕಾಲೇಜಿನ ಹಿಂಭಾಗದಿಂದ ತಮ್ಮನ್ನು ಕರೆದುಕೊಂಡು ಹೋಗಿ ಹಲ್ಲೆ ಮಾಡಲಾಗಿದೆ ಎಂದು ಮನೀಶ್‌ ಆರೋಪಿಸಿದ್ದಾರೆ. “ಸಾಮ್ರಾಟ್‌ ನನ್ನನ್ನು ಕರೆದುಕೊಂಡು ಹೋಗಿ ಹೊಡೆದು ಕಳುಹಿಸಿದ್ದಾರೆ. ಕಾರು ಓವರ್‌ಟೇಕ್‌ ವಿಚಾರಕ್ಕೆ ಗಲಾಟೆಯಾಗಿತ್ತು. ಆರು ಮಂದಿ ಸೇರಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಎಲ್ಲರ ವಿರುದ್ಧವೂ ದೂರು ನೀಡಿದ್ದೇನೆ” ಎಂದು ಮನೀಶ್‌ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.

ಸಾಮ್ರಾಟ್‌ ಮತ್ತು ಮನೀಶ್‌ ಪರಸ್ಪರ ಸ್ನೇಹಿತರಾಗಿದ್ದು, ಇಬ್ಬರೂ ಆರ್‌.ವಿ. ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವುದರಿಂದ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸುವುದು ಪೊಲೀಸರಿಗೆ ಸವಾಲಾಗಿದೆ. ಸದ್ಯ ಮನೀಶ್‌ ಮಾಡಿರುವ ಅಪಹರಣ ಮತ್ತು ಹಲ್ಲೆ ಆರೋಪದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನೆಯ ಸಂದರ್ಭದಲ್ಲಿ ಯಾರೆಲ್ಲ ಇದ್ದರು ಹಾಗೂ ನಿಜವಾಗಿ ಹಲ್ಲೆ ನಡೆದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

Related posts

ರಾಜ್ಯದ 43.81 ಲಕ್ಷ ಮತದಾರರ ಸ್ಥಿತಿ ಅತಂತ್ರ : ಚುನಾವಣಾ ಆಯೋಗದಿಂದ ನೋಟಿಸ್

JanaNota Editor

ಬಳ್ಳಾರಿ ಚಲೋದಲ್ಲಿ ಶಿವಮೊಗ್ಗದ ಶಕ್ತಿ ಪ್ರದರ್ಶನ : 1,200ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿ

JanaNota Editor

ತಂದೆಯ ಸಾವಿನ ಬಳಿಕ ಆಸ್ತಿ ಕಲಹ : ತಹಶೀಲ್ದಾರ್ ಕಚೇರಿ ಮುಂದೆ ಶವವಿಟ್ಟು ಧರಣಿ

JanaNota Editor