ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ಸಾರ್ವಜನಿಕರು ಹಾಗೂ ಸರ್ಕಾರಗಳು ನಿರೀಕ್ಷಿತ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿಲ್ಲ ಎಂಬ ಕೊರಗು ಕ್ರೀಡಾಸಕ್ತರಿಂದ ಕೇಳಿಬರುತ್ತಿದೆ. ಆದರೆ, ಇಂತಹ ನಿರಾಶೆಯ ಮಾತುಗಳ ನಡುವೆಯೂ ಶಿವಮೊಗ್ಗ ನಗರದಿಂದ ದಿನಕ್ಕೊಬ್ಬ ಕ್ರೀಡಾಪಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗುತ್ತಿರುವುದು ಹೆಮ್ಮೆಯ ಸಂಗತಿ.
ಈ ಸಾಲಿಗೆ ಇದೀಗ ಅವಳಿ ಸಹೋದರರಾದ ಪವನ್ ಮತ್ತು ಪುನೀತ್ ಸೇರ್ಪಡೆಯಾಗಿದ್ದಾರೆ. ಷಟಲ್ ಬ್ಯಾಡ್ಮಿಂಟನ್‌ನಲ್ಲಿ ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ಶಿಸ್ತಿನ ತರಬೇತಿಯಿಂದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಈ ಸಹೋದರರು, 17 ವರ್ಷದೊಳಗಿನ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಹರಿಯಾಣದ ಪಂಚಕುಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 17 ವರ್ಷದೊಳಗಿನ ರಾಷ್ಟ್ರೀಯ ಡಬಲ್ಸ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪವನ್–ಪುನೀತ್ ಜೋಡಿ ಅತ್ಯುತ್ತಮ ಆಟ ಪ್ರದರ್ಶಿಸಿ ಬಾಲಕರ ಡಬಲ್ಸ್ ಹಾಗೂ ಮಿಕ್ಸಡ್ ಡಬಲ್ಸ್ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು. ಇದರೊಂದಿಗೆ ಆಕರ್ಷಕ ಪಾರಿತೋಷಕ ಹಾಗೂ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡು ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದ ಚರಣ್ ರಾಮ್ ಮತ್ತು ಹರಿಕೃಷ್ಣ ಜೋಡಿಯನ್ನು ಮಣಿಸಿದ ಪವನ್–ಪುನೀತ್, ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದು ವಿಶೇಷ ಸಾಧನೆಯಾಗಿದೆ. ಈ ಮೂಲಕ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವೂ ಇವರಿಗೆ ದೊರೆತಿದೆ.
ಚೀನಾದಲ್ಲಿ ಭಾರತ ಪ್ರತಿನಿಧಿಸಿದ ಹೆಮ್ಮೆ : ಪವನ್ ಮತ್ತು ಪುನೀತ್ ಅವರು ಚೀನಾದಲ್ಲಿ ನಡೆದ ಏಷ್ಯನ್ ಬ್ಯಾಡ್ಮಿಂಟನ್ ಜೂನಿಯರ್ ಮತ್ತು ಸಬ್-ಜೂನಿಯರ್ ಚಾಂಪಿಯನ್‌ಶಿಪ್‌ನ 17 ವರ್ಷದೊಳಗಿನ ವಿಭಾಗದ ಬಾಲಕರ ಡಬಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ದೇಶದ ಪರವಾಗಿ ಕಣಕ್ಕಿಳಿದಿರುವುದು ಶಿವಮೊಗ್ಗಕ್ಕೆ ಹೆಮ್ಮೆಯ ವಿಚಾರವಾಗಿದೆ.
ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದ ಏಷ್ಯನ್ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿಯೂ ಭಾಗವಹಿಸಿ ಉತ್ತಮ ಆಟದ ಪ್ರದರ್ಶನ ನೀಡಿರುವ ಈ ಸಹೋದರರು ಹಲವು ಪ್ರಶಸ್ತಿ ಹಾಗೂ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಕ್ಕನ ರಾಕೆಟ್‌ನಿಂದ ಆರಂಭವಾದ ಪಯಣ : ಪವನ್ ಮತ್ತು ಪುನೀತ್ ಅವರ ಕ್ರೀಡಾ ಪಯಣದ ಆರಂಭವೂ ವಿಶೇಷವಾಗಿದೆ. ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿರುವ ಅಕ್ಕನ ಷಟಲ್ ರಾಕೆಟ್ ಹಿಡಿದು ಮನೆಯ ಬಾಗಿಲಲ್ಲೇ ಆಟ ಆರಂಭಿಸಿದ ಈ ಸಹೋದರರು ಮುಂದೊಂದು ದಿನ ಭಾರತದ ಪ್ರಮುಖ ಆಟಗಾರರಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
ಎಂಟನೇ ವಯಸ್ಸಿನಲ್ಲೇ ಷಟಲ್ ರಾಕೆಟ್ ಹಿಡಿದ ಅವಳಿ ಸಹೋದರರು, ಓದಿನ ಜೊತೆಗೆ ಬ್ಯಾಡ್ಮಿಂಟನ್ ತರಬೇತಿಯನ್ನೂ ಮುಂದುವರಿಸಿದರು. ಕೇವಲ ಐದು ವರ್ಷಗಳ ಕ್ರೀಡಾ ಪಯಣದಲ್ಲಿ ಜಿಲ್ಲಾ ಮಟ್ಟದಿಂದ ವಿಭಾಗ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಂದೊಂದೇ ಮೆಟ್ಟಿಲು ಏರುತ್ತಾ ಬಂದಿದ್ದಾರೆ.
ಓದಿನಲ್ಲೂ ಮುಂದು : ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪವನ್ ಮತ್ತು ಪುನೀತ್ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕ್ರೀಡೆಯ ಜೊತೆಗೆ ಓದಿನಲ್ಲಿಯೂ ಉತ್ತಮ ಸಾಧನೆ ಮಾಡುತ್ತಿರುವ ಈ ಪ್ರತಿಭೆಗಳಿಗೆ ಇನ್ನೂ 17 ವರ್ಷ ಮಾತ್ರ.
ಶಿವಮೊಗ್ಗದ ಪುರಲೆ ವೆಂಕಟೇಶ ನಗರ ನಿವಾಸಿಗಳಾದ ಸುರೇಶ್ ಮತ್ತು ಶಕುಂತಲಾ ದಂಪತಿಯ ಪುತ್ರರಾದ ಪವನ್–ಪುನೀತ್, ಬಾಲ್ಯದಲ್ಲೇ ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟರು. ಈವರೆಗೆ ಹಲವು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಪುಣೆಯಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ : ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಇಂಡಿಯಾ ಜೂನಿಯರ್ ಗ್ರ್ಯಾನ್‌ಪ್ರಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪವನ್–ಪುನೀತ್ ಜೋಡಿ ಬಾಲಕರ ಡಬಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪ್ರಶಸ್ತಿ ಸುತ್ತಿನಲ್ಲಿ ಇಂಡೋನೇಷ್ಯಾದ ಜೋಡಿ ವಿರುದ್ಧ 25–23, 25–19 ಅಂಕಗಳ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿತು. ಈ ಗೆಲುವು ಅವರ ಅಂತರರಾಷ್ಟ್ರೀಯ ಮಟ್ಟದ ಸಾಮರ್ಥ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ಮಲೇಷ್ಯಾದಲ್ಲಿ ಭಾರತ ತಂಡದ ಪರ ಕಣಕ್ಕೆ : ಇದೀಗ ಪವನ್ ಮತ್ತು ಪುನೀತ್ ಅವರ ಕ್ರೀಡಾ ಪಯಣ ಮತ್ತೊಂದು ಹಂತ ತಲುಪಿದೆ. ಸೆಪ್ಟೆಂಬರ್ 1ರಿಂದ 5ರವರೆಗೆ ಮಲೇಷ್ಯಾದ ಕೌಲಾಲಂಪುರದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸೀನಿಯರ್ಸ್ ವಿಭಾಗದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಈ ಅವಳಿ ಸಹೋದರರು ಕಣಕ್ಕಿಳಿದಿದ್ದಾರೆ.
ಜೂನಿಯರ್ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಈ ಯುವ ಪ್ರತಿಭೆಗಳು ಇದೀಗ ಸೀನಿಯರ್ಸ್ ವಿಭಾಗದಲ್ಲಿಯೂ ತಮ್ಮ ಸಾಮರ್ಥ್ಯ ಪ್ರದರ್ಶಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
ತರಬೇತುದಾರರು, ಪೋಷಕರಿಗೆ ಕೃತಜ್ಞತೆ : ತಮ್ಮ ಆಟದಲ್ಲಿನ ತಪ್ಪುಗಳನ್ನು ತಿದ್ದಿ, ಸೂಕ್ತ ಮಾರ್ಗದರ್ಶನ ನೀಡಿದ ಬೆಂಗಳೂರಿನ ಯಾದವ್ ಪ್ರೊ ಬ್ಯಾಡ್ಮಿಂಟನ್ ಅಕಾಡೆಮಿಯ ತರಬೇತುದಾರ ಮಧುಸೂಧನ್ ಅವರಿಗೆ ಪವನ್ ಮತ್ತು ಪುನೀತ್ ಕೃತಜ್ಞತೆ ಸಲ್ಲಿಸಿದ್ದಾರೆ.
ತಮ್ಮ ಸಾಧನೆಗೆ ಸದಾ ಬೆನ್ನೆಲುಬಾಗಿ ನಿಂತ ಪೋಷಕರು, ಬಿಜಿಎಸ್ ಶಾಲಾ-ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಅವರು ಸ್ಮರಿಸಿದ್ದಾರೆ.
ಅದೇ ರೀತಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸೂಕ್ತ ಹಾಗೂ ಸಕಾಲಿಕ ಮಾರ್ಗದರ್ಶನ ಮತ್ತು ಪ್ರೋತ್ಸಾಹ ತಮ್ಮ ಕ್ರೀಡಾ ಬದುಕಿಗೆ ದಾರಿ ತೋರಿಸಿದೆ ಎಂದು ಪವನ್–ಪುನೀತ್ ತಿಳಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ದೇಶದ ಕೀರ್ತಿ ಹೆಚ್ಚಿಸುವ ಗುರಿ : ಭವಿಷ್ಯದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದು ದೇಶದ ಉತ್ತಮ ಆಟಗಾರರಾಗಬೇಕು. ಒಲಿಂಪಿಕ್ಸ್‌ನಂತಹ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎಂಬುದು ತಮ್ಮ ಮಹಾನ್ ಗುರಿಯಾಗಿದೆ ಎಂದು ಪವನ್ ಮತ್ತು ಪುನೀತ್ ಹೇಳುತ್ತಾರೆ.
ಜಿಲ್ಲಾ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿರುವ ಈ ಅವಳಿ ಸಹೋದರರ ಕ್ರೀಡಾ ಪಯಣ ಇನ್ನಷ್ಟು ಯಶಸ್ವಿಯಾಗಲಿ ಎಂಬುದು ಶಿವಮೊಗ್ಗದ ಕ್ರೀಡಾಭಿಮಾನಿಗಳ ಆಶಯ.
ರಾ.ಹ. ತಿಮ್ಮೇನಹಳ್ಳಿ, ಶಿವಮೊಗ್ಗ
